ಉತ್ತರ ಪ್ರದೇಶದ ಘಟಂಪುರದಲ್ಲಿ ಗೂಗಲ್ ಮ್ಯಾಪ್ ತಂಡದ ಸದಸ್ಯರನ್ನು ಕಳ್ಳರೆಂದು ಭಾವಿಸಿ ಹಳ್ಳಿಯವರು ಥಳಿಸಿದ್ದಾರೆ. ಬಿರ್ಹಾರ್ ಔಟ್‌ಪೋಸ್ಟ್ ಪ್ರದೇಶದ ಮಹೋಲಿಯಾ ಗ್ರಾಮದ ಗ್ರಾಮಸ್ಥರು ಗೂಗಲ್ ಮ್ಯಾಪ್ ಕ್ಯಾಮೆರಾ ಅಳವಡಿಸಲಾದ ಕಾರನ್ನು ಕಳ್ಳರ ಕಾರು ಎಂದು ಭಾವಿಸಿದ್ದರಿಂದ ಈ ಎಡವಟ್ಟು ನಡೆದಿದೆ.
ಗ್ರಾಮಸ್ಥರು ಕಾರನ್ನು ಸುತ್ತುವರಿದು ಗಲಾಟೆ ಮಾಡಿದಾಗ ಸಿಬ್ಬಂದಿ ಭಯದಿಂದ ಪೊಲೀಸ್‌ಗೆ ಕರೆ ಮಾಡಿದ್ದರು, ಸಾಧ್ ಪೊಲೀಸರು ಸ್ಥಳಕ್ಕೆ ಬಂದು ಜನರಿಗೆ ತಿಳಿ ಹೇಳಿದರು. ನಂತರ ಕಾರನ್ನು ಕಳುಹಿಸಲಾಯಿತು. ಗೂಗಲ್‌ನ ಸ್ಟ್ರೀಟ್ ವ್ಯೂ ಮ್ಯಾಪಿಂಗ್ ಕಾರು, 360 ಡಿಗ್ರಿ ಕ್ಯಾಮೆರಾ ಹೊತ್ತು ಹಾದುಹೋದಾಗ ಊರಿಗೆ ಕಳ್ಳರು ಬಂದಿದ್ದಾರೆಂಬ ವದಂತಿ ಹಬ್ಬಿತ್ತು. ಗ್ರಾಮಸ್ಥರು ಸ್ಥಳದಲ್ಲಿ ಸೇರಿಕೊಂಡು ಗದ್ದಲವುಂಟು ಮಾಡಿ ಕಾರನ್ನು ನಿಲ್ಲಿಸಲು ರಸ್ತೆಯ ಮೇಲೆ ಮರದ ದಿಮ್ಮಿಗಳನ್ನು ಹಾಕಿದರು. ಕಾರಿನಲ್ಲಿದ್ದ ಸಿಬ್ಬಂದಿ ಭಯಗೊಂಡು ಪೊಲೀಸರಿಗೆ ಕರೆ ಮಾಡಿದರು. ಪೊಲೀಸರು ಬಂದು ಗ್ರಾಮಸ್ಥರಿಗೆ ವಿವರಿಸಿದ ನಂತರ ಕಾರನ್ನು ಸುರಕ್ಷಿತವಾಗಿ ಕಳುಹಿಸಲಾಯಿತು ಎಂದು ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.
ಗ್ರಾಮದಲ್ಲಿ ಇತ್ತೀಚೆಗೆ ಹಲವು ಕಳವು, ದರೋಡೆ ನಡೆದಿರುವ ಕಾರಣ ಗ್ರಾಮಸ್ಥರು ಅಲ್ಲಿ ಓಡಾಡುವ ಎಲ್ಲಾ ವಾಹನಗಳ ಮೇಲೆ ನಿಗಾ ಇಡುತ್ತಿದ್ದಾರೆ. ಆಗಸ್ಟ್ 28ರಂದು ಗೂಗಲ್ ಮ್ಯಾಪ್ ತಂಡವು ಪೊಲೀಸರು ಅಥವಾ ಗ್ರಾಮ ಅಧಿಕಾರಿಗಳಿಗೆ ಸೂಚನೆ ನೀಡದೆ ರಸ್ತೆ ಮಟ್ಟದ ಸಮೀಕ್ಷೆಯನ್ನು ನಡೆಸುತ್ತಿತ್ತು. ಆಗ ಊರಿನವರು ಅವರು ಕಳ್ಳರೆಂದು ಥಳಿಸಿದ್ದಾರೆ. ಪೊಲೀಸರು ಗ್ರಾಮಸ್ಥರು ಮತ್ತು ಸಮೀಕ್ಷಾ ತಂಡವನ್ನು ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.