ಮುಂದಿನ ಒಲಂಪಿಕ್ಸ್ ತರಬೇತಿ ಪಡೆಯಲು ರಾಜ್ಯದ 60 ಅತ್ಯಂತ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ವಾರ್ಷಿಕ ತಲಾ ರೂ 10 ಲಕ್ಷ ಸಹಾಯಧನ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ರಾಜ್ಯ ದಸರಾ ಸಿಎಂ ಕಪ್ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ಒಲಂಪಿಕ್ಸ್ ಪದಕ ವಿಜೇತರಿಗೆ ಕರ್ನಾಟಕ ಸರ್ಕಾರ 6 ಕೋಟಿ ರೂ. ನಗದು ಬಹುಮಾನ ನೀಡಲಿದೆ ಎಂದು ತಿಳಿಸಿದರು.
“ಸರ್ಕಾರ ಕ್ರೀಡಾಪಟುಗಳಿಗೆ ಎಲ್ಲ ರೀತಿಯ ಸಹಕಾರವನ್ನು ನೀಡುತ್ತಿದೆ. ಮುಂದಿನ ಒಲಂಪಿಕ್ಸ್ ಗೆ ತರಬೇತಿ ಪಡೆಯಲು ರಾಜ್ಯದ 60 ಅತ್ಯಂತ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ವಾರ್ಷಿಕ ತಲಾ ರೂ 10 ಲಕ್ಷ ಸಹಾಯಧನ ನೀಡಿ ತರಬೇತಿ ನೀಡಲಾಗುವುದು. ಅಲ್ಲದೇ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕವಿಜೇತ ಕ್ರೀಡಾಪಟುಗಳಿಗೆ ಸರ್ಕಾರ 6 ಕೋಟಿ ರೂ ಗಳ ನಗದು ಬಹುಮಾನವನ್ನೂ ನೀಡಲಿದೆ,” ಎಂದು ಭರವಸೆ ನೀಡಿದರು.
ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗ ಒದಗಿಸಲು ಎಲ್ಲ ಇಲಾಖೆಗಳಲ್ಲಿ ಶೇ. 2ರಷ್ಟು ಮೀಸಲಾತಿಯನ್ನೂ ಹಾಗೂ ಪೊಲೀಸ್ ಇಲಾಖೆಯಲ್ಲಿ ಶೇ 2 ರಿಂದ 3ರಷ್ಟು ಕ್ರೀಡಾಮೀಸಲಾತಿಯನ್ನು ನೀಡಲಾಗುತ್ತಿದೆ ಎಂದರು.
ಇಂದಿನ ಯುವಜನತೆ ಶಿಕ್ಷಣ ಹಾಗೂ ಕ್ರೀಡೆಗೆ ಹೆಚ್ಚು ಒತ್ತು ನೀಡಿದರೆ ಅವರ ದೈಹಿಕ ಹಾಗೂ ಮಾನಸಿಕ ವಿಕಸನಕ್ಕೆ ಸಹಕಾರಿಯಾಗಲಿದೆ. ಸದೃಢ ಆರೋಗ್ಯಕ್ಕೆ ಕ್ರೀಡೆ ಹಾಗೂ ವ್ಯಾಯಾಮ ಅತ್ಯಗತ್ಯ ಎಂದು ತಿಳಿಸಿದರು.