ಬೆಂಗಳೂರು: ಸಣ್ಣ ಉದ್ದಿಮೆ ಸ್ಥಾಪಿಸಲು ಗ್ರಾಮೀಣ ಭಾಗದಲ್ಲಿ ಎರಡು ಎಕರೆವರೆಗೆ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕಾಗಿ ಬಳಸಲು ಅವಕಾಶ ಕಲ್ಪಿಸುವ 2025ರ ಕರ್ನಾಟಕ ಭೂ ಸುಧಾರಣೆಗಳು ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆಯಿತು.
ಕಂದಾಯ ಸಚಿವ ಕೃಷ್ಣಭೈರೇಗೌಡ ವಿಧೇಯಕ ಕುರಿತು ಮಾತನಾಡಿ, ಖಾಸಗಿ ವ್ಯಕ್ತಿಗಳ ಕೃಷಿ ಜಮೀನನ್ನು ಶಿಕ್ಷಣ ಸಂಸ್ಥೆಗಳು ಅಥವಾ ಸಣ್ಣ ಉದ್ದಿಮೆ/ಕೈಗಾರಿಕೆಗಳಿಗೆ ಖರೀದಿಸಲು ಸೆಕ್ಷನ್ 109ರ ಅಡಿ ಈ ಹಿಂದೆಯೇ ಅನುಮತಿ ನೀಡಲಾಗಿದೆ. ಆದರೆ, ಆ ಅನುಮತಿಗಾಗಿ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಬೇಕಿತ್ತು. ಈ ನಿಯಮಕ್ಕೆ ತಿದ್ದುಪಡಿ ಮಾಡಲಾಗಿದ್ದು, ಅಧಿಕಾರವನ್ನು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ ಎಂದು ಹೇಳಿದರು.
ಭೂ ಖರೀದಿಗೆ ಜಿಲ್ಲಾಧಿಕಾರಿ ಅನುಮತಿ: ಸಣ್ಣ ಉದ್ಯಮ ಆರಂಭಿಸುವ ಸಂಸ್ಥೆಗಳಿಗೆ ಜಿಲ್ಲಾಧಿಕಾರಿ 4 ಹೆಕ್ಟೇರ್ವರೆಗಿನ ಭೂಮಿ ಖರೀದಿಗೆ ಅನುಮತಿ ನೀಡಬಹುದು. ಹೀಗೆ ನೀಡುವ ಅನುಮತಿ ಆಟೋಮ್ಯಾಟಿಕ್ ಆಗಿ ಭೂ ಪರಿವರ್ತನೆಯಾಗಿರುತ್ತದೆ. ಅಂದರೆ, ಕೃಷಿ ಭೂಮಿಯು ಕೃಷಿಯೇತರ ಚಟುವಟಿಕೆಗೆ ಬಳಕೆಗೆ ಅವಕಾಶ ಸಿಗುತ್ತದೆ. ಈ ಹಿಂದೆ ಸಣ್ಣ ಉದ್ದಿಮೆದಾರರು, ಶಿಕ್ಷಣ ಸಂಸ್ಥೆಗಳು ಭೂಮಿಯನ್ನು ಯಾವುದೋ ಉದ್ದೇಶಕ್ಕೆ ಪಡೆದು ನಂತರದಲ್ಲಿ ಬೇರೆ ಉದ್ದೇಶಕ್ಕೆ ಬಳಸಲು ಅನುಮತಿ ಕೋರಲಾಗುತ್ತಿತ್ತು. ಅದಕ್ಕೆ ಅನುಮತಿ ನೀಡಲು ಅವಕಾಶ ಇರಲಿಲ್ಲ. ಪ್ರಸ್ತುತ ಆ ನಿಯಮವನ್ನೂ ತಿದ್ದುಪಡಿಸಿ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯದ ಯಾವುದೇ ಭಾಗದಲ್ಲಿ ಎರಡು ಎಕರೆವರೆಗೆ ಕೈಗಾರಿಕೆ ಮಾಡಲು ಭೂ ಪರಿವರ್ತನೆಗೆ ವಿನಾಯಿತಿ ನೀಡಲಾಗುತ್ತದೆ. ಸಣ್ಣ ಉದ್ದಿಮೆದಾರರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ತಿದ್ದುಪಡಿಯನ್ನು ತರಲಾಗಿದೆ. ನವೀಕರಿಸಬಹುದಾದ ಇಂಧನ ಕ್ಷೇತ್ರ ಪ್ರಸ್ತುತ ಉದಯೋನ್ಮುಖ ವಲಯ. ಕಲ್ಲಿದ್ದಲಿನಿಂದ ನವೀಕರಿಸಬಹುದಾದ ಇಂಧನದ ಕಡೆಗೆ ಬದಲಾಗಬೇಕು ಎಂಬುದು ಸರ್ಕಾರದ ಹಾಗೂ ಜನ ಸಾಮಾನ್ಯರ ಆದ್ಯತೆ. ಸೋಲಾರ್, ಪವನ ಶಕ್ತಿ ಘಟಕ ಸ್ಥಾಪಿಸಲು ಅನುಮತಿ ಕೊಡಿಸುವ ನೆಪದಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಸಣ್ಣ ಉದ್ದಿಮೆದಾರರು ಮಧ್ಯವರ್ತಿಗಳ ಕಾಟಕ್ಕೆ ಬೇಸತ್ತಿದ್ದಾರೆ ಎಂದರು.