ಬೆಂಗಳೂರು: ಒಡವೆ ಮಾಡಿಸಿಕೊಡುವುದಾಗಿ ತಿಳಿಸಿ 8 ಕೆ.ಜಿ ಮೌಲ್ಯದ ಗಟ್ಟಿ ಚಿನ್ನ ಕಳ್ಳತನ ಮಾಡಿ ಮೋಜು ಮಸ್ತಿ ಮಾಡುತ್ತಿದ್ದ ಅಕ್ಕಸಾಲಿಗನನ್ನು ನಗರದ ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನ ಮೂಲದ ಅಕ್ಕಸಾಲಿಗ ಮನೀಷ್ ಕುಮಾರ್ ಸೋನಿ ಬಂಧಿತ ಆರೋಪಿ. ಒಡವೆಗಳನ್ನ ಮಾಡಿಕೊಡುತ್ತೇನೆ ಎಂದು ತಿಳಿಸಿ ಮಾಲೀಕನ ಚಿನ್ನದ ಪಡೆದು ವಂಚಿಸಿದ್ದ.
ಆರೋಪಿ ಚಿನ್ನದ ವ್ಯಾಪಾರಿಯಾಗಿದ್ದ ವಿಶಾಲ್ ಬಳಿ ಕೆಲಸ ಮಾಡುತ್ತಿದ್ದ. ಹೇಳಿದ ಸಮಯಕ್ಕೆ ಸರಿಯಾಗಿ ಕೆಲಸ ಮಾಡಿ, ಒಡವೆ ಮಾಡಿಕೊಟ್ಟು ವಿಶ್ವಾಸ ಗಳಿಸಿದ್ದ. ಹೀಗಾಗಿ ಆರೋಪಿಯ ಮೇಲೆ ಮಾಲೀಕನಿಗೆ ಸಹಜವಾಗಿಯೇ ನಂಬಿಕೆ ಇತ್ತು. ಆದರೆ ಆರೋಪಿ ಇತ್ತೀಚೆಗೆ ಮೋಜು, ಮಸ್ತಿಗಿಳಿದಿದ್ದ. ಇದರಿಂದ ಹಣದಾಸೆಗೆ ಬಿದ್ದು ಒಡವೆ ಮಾಡಿಕೊಡುವುದಾಗಿ ತಿಳಿಸಿ ಮಾಲೀಕನ ಬಳಿ 8 ಕೆ.ಜಿ ಗಟ್ಟಿ ಚಿನ್ನ ಪಡೆದು ಎಸ್ಕೇಪ್ ಆಗಿದ್ದ.
ಪರಾರಿಯಾಗಿ ಹೆಂಡತಿ ಜೊತೆ ಗೋವಾದಲ್ಲಿ ಮೋಜು ಮಸ್ತಿ ಮಾಡುತ್ತಿದ್ದ. ಮೋಜು ಮಸ್ತಿ ಮಾಡುವಾಗಲೇ ಜಯನಗರ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಜೊತೆಗೆ 3.5 ಕೆ.ಜಿ ಚಿನ್ನ ಹಾಗೂ 8 ಲಕ್ಷ ನಗದನ್ನು ಜಪ್ತಿ ಮಾಡಿದ್ದಾರೆ. ಉಳಿದ 4.5 ಕೆ.ಜಿ ಚಿನ್ನವನ್ನು ವಸೂಲಿ ಮಾಡಿ ಮಾಲೀಕನಿಗೆ ಹಿಂತಿರುಗಿಸಬೇಕಾದ ಹೊಣೆ ಪೊಲೀಸರ ಮೇಲಿದೆ.