ನವದೆಹಲಿ: ನಿಮಗೆ ಕಾಮನ್ ಸೆನ್ಸ್ ಇಲ್ಲವಾ? ಏನು ಮಾತನಾಡುತ್ತಿದ್ದೀರಿ ಎಂಬ ಸೂಕ್ಷ್ಮತೆ ಅರಿವಿದೆಯಾ? ಹೋಗಿ ಹೈಕೋರ್ಟ್ ನಲ್ಲಿ ಕ್ಷಮೆ ಕೇಳಿ ಎಂದು ಮಧ್ಯಪ್ರದೇಶದ ಬಿಜೆಪಿ ಸಚಿವ ವಿಜಯ್ ಶಾಗೆ ಸುಪ್ರೀಂಕೋರ್ಟ್ ಚಾಟಿ ಬೀಸಿದೆ.
ಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಸಚಿವ ವಿಜಯ್ ಶಾ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಮಧ್ಯಪ್ರದೇಶ ಹೈಕೋರ್ಟ್ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ವಿಜಯ್ ಶಾ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.
ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ವಿಜಯ್ ಶಾ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದ ನೂತನ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿಆರ್ ಗವಾಯಿ, ನೀವು ಯಾವ ರೀತಿಯ ಹೇಳಿಕೆ ನೀಡಿದ್ದೀರಿ ಎಂಬುದು ಗೊತ್ತಿದೆಯಾ? ಹೈಕೋರ್ಟ್ ಮುಂದೆ ಹೋಗಿ ಕ್ಷಮೆ ಕೇಳಿ ಎಂದು ಸೂಚಿಸಿದ್ದಾರೆ.
ನೀವು ಅಂದುಕೊಂಡಂತೆ ಒಂದೇ ದಿನದಲ್ಲಿ ಎಲ್ಲವೂ ಮುಗಿಯುವುದಿಲ್ಲ. ನಿಮ್ಮ ಸ್ಥಾನ ಏನು ಎಂಬುದು ಅರಿವಿದೆಯಾ? ಎಂದು ನ್ಯಾಯಮೂರ್ತಿಗಳು ಕಿಡಿಕಾರಿದರು.
ಮಧ್ಯಪ್ರದೇಶದ ಇಂಧೋರ್ ನಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕರ್ನಲ್ ಸೋಫಿಯಾ ಖುರೇಷಿ ಭಯೋತ್ಪಾದಕರ ಸೋದರಿ ಆಗಿದ್ದಾಳೆ. ಉಗ್ರರು ಬಟ್ಟೆ ಬಿಚ್ಚಿ ಮುಗ್ಧರನ್ನು ಹತ್ಯೆಗೈದಿದ್ದಾರೆ. ಅದೇ ರೀತಿ ಅವರ ಮೇಲೆ ಸೇಡು ತೀರಿಸಿಕೊಳ್ಳಲು ಅವರದ್ದೇ ಧರ್ಮದ ಸೋದರಿ ಸೋಫಿಯಾ ಖುರೇಷಿ ಅವರನ್ನು ಪ್ರಧಾನಿ ಮೋದಿ ಮುಂದೆ ಬಿಟ್ಟಿದ್ದರು ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.