Menu

ಜಾಗತಿಕ ಹೂಡಿಕೆದಾರರ ಸಮಾವೇಶ:  ಗ್ರೀಸ್ ಮಾಜಿ ಪ್ರಧಾನಿ ಸೇರಿ 75 ಪ್ರಮುಖ ಸಾಧಕರು ಭಾಗಿ

nirmala sitaraman

ಬೆಂಗಳೂರು: ಇದೇ 11ರಿಂದ 14ರವರೆಗೆ ಇಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಶಶಿ ತರೂರ್, ಆನಂದ್ ಮಹೀಂದ್ರ, ಕಿರಣ್ ಮಜುಂದಾರ್ ಷಾ, ಪ್ರಶಾಂತ್ ಪ್ರಕಾಶ್, ಗ್ರೀಸ್ ಮಾಜಿ ಪ್ರಧಾನಿ ಜಾರ್ಜ್ ಪಪಾಂಡ್ರಿಯೂ, ವೋಲ್ವೊ ಸಮೂಹದ ಅಧ್ಯಕ್ಷ ಮಾರ್ಟಿನ್ ಲುಂಡ್ ಸ್ಟೆಡ್ ಸೇರಿದಂತೆ 75 ಸಾಧಕ ಉದ್ಯಮಿಗಳು ಮಾತನಾಡಲಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ‌ ಬಿ ಪಾಟೀಲ ಬುಧವಾರ ತಿಳಿಸಿದ್ದಾರೆ.

ಈ ಬಗ್ಗೆ ವಿವರ ಮಾಹಿತಿ ನೀಡಿರುವ ಅವರು, ಆದಿತ್ಯ ಬಿರ್ಲಾ ಗ್ರೂಪ್ ಅಧ್ಯಕ್ಷ ಕುಮಾರಮಂಗಲಂ‌ ಬಿರ್ಲಾ, ಜಿಂದಾಲ್ ಸ್ಟೀಲ್ ವರ್ಕ್ಸ್ ವ್ಯವಸ್ಥಾಪಕ‌ ನಿರ್ದೇಶಕ ಸಜ್ಜನ್ ಜಿಂದಾಲ್, ಆಯುಷ್ಮಾನ್ ಭಾರತ ಯೋಜನೆಯ ಮಾಜಿ‌ ಸಿಇಒ ಇಂದುಭೂಷಣ್, ಸಿನಿಮಾ ನಿರ್ಮಾಪಕಿ‌ ಕಿರಣ್ ರಾವ್, ಇಸ್ರೋ ಮಾಜಿ ಅಧ್ಯಕ್ಷ ಸೋಮನಾಥ್, ಏಕಸ್ ಸಿಇಒ ಅರವಿಂದ್ ಮೆಳ್ಳಿಗೇರಿ, ಅಮೆರಿಕದ ಇಂಧನ‌ ಇಲಾಖೆಯ ಸಿಐಒ ಆ್ಯನ್ ಡಂಕಿನ್, ಝೆರೋದಾ ಸಹ ಸಂಸ್ಥಾಪಕ ನಿಖಿಲ್ ಕಾಮತ್, ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ, ಕಿರ್ಲೋಸ್ಕರ್ ಸಮೂಹದ ಎಂಡಿ ಗೀತಾಂಜಲಿ‌ ಕಿರ್ಲೋಸ್ಕರ್ ಕೂಡ ಸಮಾವೇಶದಲ್ಲಿ ವಿವಿಧ ಗೋಷ್ಠಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದಿದ್ದಾರೆ.

ಸಮಾವೇಶದಲ್ಲಿ ಐದು ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ಒಟ್ಟಾರೆಯಾಗಿ 30ಕ್ಕೂ ಹೆಚ್ಚು ಚಿಂತನಾ ಗೋಷ್ಠಿಗಳನ್ನು ಏರ್ಪಡಿಸಲಾಗಿದೆ. ಸಣ್ಣ ಮತ್ತು ಮಧ್ಯಮ ಸ್ತರದ ಕೈಗಾರಿಕೆಗಳು ಹಾಗೂ ನವೋದ್ಯಮಗಳಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಮುಖ್ಯವಾಗಿ ಭವಿಷ್ಯದ ತಂತ್ರಜ್ಞಾನ, ಆರ್ಥಿಕತೆ ಮತ್ತು ಕೈಗಾರಿಕಾ ಉದ್ಯಮ ಕುರಿತು ಸಮಾವೇಶದಲ್ಲಿ ಮೂರು ದಿನಗಳ ಕಾಲ ಚರ್ಚಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.

ಸಮಾವೇಶದ ಮೂಲಕ 10 ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಆಕರ್ಷಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಈ ಪೈಕಿ ಶೇಕಡಾ 80ರಷ್ಟಾದರೂ ನೈಜ ಹೂಡಿಕೆಯಾಗಿ ಬರಬೇಕು ಎನ್ನುವುದು ನಮ್ಮ ಪ್ರಯತ್ನವಾಗಿದೆ ಎಂದು ಎಂ ಬಿ ಪಾಟೀಲ ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *