ಕೋಲಾರ: ರಾಜ್ಯ ಸರ್ಕಾರ ಹಳೇ ಮೈಸೂರು ಭಾಗಕ್ಕೆ ಘೋಷಣೆ ಮಾಡಿದಂತೆ ಹಿಂದುಳಿದ ಕೋಲಾರ ಜಿಲ್ಲೆಗೂ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಆಮ್ ಆದ್ಮಿ ಪಾರ್ಟಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ ರಮೇಶ್ ಒತ್ತಾಯಿಸಿದ್ದಾರೆ.
ಪತ್ರಿಕಾ ಹೇಳಿಕೆಯಲ್ಲಿ ಮಾತನಾಡಿದ ಅವರು ಇತ್ತೀಚಿಗೆ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳು ತಮ್ಮ ತವರು ಜಿಲ್ಲೆಗಳಾದ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಅಭಿವೃದ್ಧಿಗಾಗಿ ಸರಿಸುಮಾರು 3600 ಕೋಟಿ ರೂ.ಗಳಷ್ಟು ವಿಶೇಷ ಅನುದಾನದ ಪ್ಯಾಕೇಜ್ ಘೋಷಣೆ ಮಾಡಿದ್ದು, ಅತೀ ಹಿಂದುಳಿದ, ಕೃಷಿಯನ್ನೇ ನಂಬಿದ ರೈತಾಪಿ ವರ್ಗವೇ ಹೆಚ್ಚಿರುವ, ಏನೂ ಅಭಿವೃದ್ಧಿ ಕಾಣದ ಕೋಲಾರ ಜಿಲ್ಲೆಗೆ ಯಾವುದೇ ಅನುದಾನ ನೀಡದೆ ಸಿದ್ದರಾಮಯ್ಯ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಟೀಕಿಸಿದ್ದಾರೆ.
ಜಿಲ್ಲೆಯಲ್ಲಿ ತಮ್ಮದೇ ಪಕ್ಷದ ನಾಲ್ಕು ಜನ ಶಾಸಕರಿದ್ದರೂ, ಇಚ್ಛಾಶಕ್ತಿ ಕೊರತೆಯಿಂದ ಜಿಲ್ಲೆಯ ಯಾವೊಂದು ಕ್ಷೇತ್ರವೂ ಅಭಿವೃದ್ಧಿ ಕಾಣದೆ ಜನ ಕಂಗಾಲಾಗಿದ್ದಾರೆ. ಜಿಲ್ಲೆಯ ಕುಡಿಯುವ ನೀರಿಗಾಗಿ ರೂಪಿಸಲಾಗಿದ್ದ ಎತ್ತಿನಹೊಳೆ ಯೋಜನೆ ಕುಂಠಿತವಾಗಿದ್ದು, ಇದರ ಬಗ್ಗೆ ಯಾವೊಬ್ಬ ಚುನಾಯಿತ ಶಾಸಕರೂ ಧ್ವನಿ ಎತ್ತುತ್ತಿಲ್ಲ, ಜಿಲ್ಲಾ ಕೇಂದ್ರ ಸ್ಥಾನವಾದ ಕೋಲಾರ ನಗರವು ಯಾವುದೇ ಅಭಿವೃದ್ಧಿ ಕಾಣದೆ ಸೊರಗುತ್ತಿದೆ.
ಜಿಲ್ಲೆಯಲ್ಲಿ ಹತ್ತಾರು ಪ್ರವಾಸಿ ತಾಣಗಳಿದ್ದರೂ ಅಭಿವೃದ್ಧಿ ಆಗಿಲ್ಲ, ಕಳೆದ ಬಜೆಟ್ ನಲ್ಲಿ ಮೆಡಿಕಲ್ ಕಾಲೇಜ್ ಘೋಷಣೆ ಆದರೂ ಇದುವರೆಗೂ ಯಾವುದೇ ಮುಂದಿನ ಪ್ರಕ್ರಿಯೆ ನಡೆದಿಲ್ಲ, ಕೃಷಿಯನ್ನೇ ಅವಲಂಬಿತವಾಗಿರುವ ರೈತಾಪಿ ವರ್ಗಕ್ಕೆ ಯಾವುದೇ ಭರವಸೆ ಇಲ್ಲ. ಇದೆಲ್ಲಾ ಮನಗಂಡು ಮಾನ್ಯ ಮುಖ್ಯಮಂತ್ರಿಗಳು ಮಲತಾಯಿ ಧೋರಣೆ ಮಾಡದೆ ಹಿಂದುಳಿದ ಕೋಲಾರ ಜಿಲ್ಲೆಗೆ ದೊಡ್ಡ ಮೊತ್ತದ ವಿಶೇಷ ಅನುದಾನದ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಆಮ್ ಆದ್ಮಿ ಪಾರ್ಟಿ ಆಗ್ರಹಿಸಿದೆ.