Menu

ಸರ್ಕಾರಿ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಿ: ಸಂತೋಷ್‌ ಲಾಡ್‌

ಸರ್ಕಾರದ ವತಿಯಿಂದ ಆಯೋಜಿಸುವ ಉತ್ಸವಗಳಲ್ಲಿ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡುವುದು ಹಾಗೂ ಅಬ್ಬರದ ಡಿ. ಜೆ ಸಿಸ್ಟಂ ಬಳಕೆಗೆ ಕಡಿವಾಣ ಹಾಕುವ ಕುರಿತು ಕಾರ್ಮಿಕ ಸಚಿವ ಸಂತೋಷ್‌ ಎಸ್‌ ಲಾಡ್‌ ಅವರು ವಿಧಾನಸಭೆಯ ಕಲಾಪದಲ್ಲಿ ಸಲಹೆಗಳನ್ನು ನೀಡಿದರು.

ಸರ್ಕಾರ ಆಯೋಜಿಸುವ ಉತ್ಸವಗಳಲ್ಲಿ ಲಕ್ಷಾಂತರ ಹಣ ವೆಚ್ಚ ಮಾಡಿ ಹೊರಗಿನಿಂದ ಕಲಾವಿದರನ್ನು ಕರೆಸುವ ಬದಲು ನಮ್ಮ ರಾಜ್ಯದ ಸ್ಥಳೀಯ ಕಲಾವಿದರನ್ನು ಆಹ್ವಾನಿಸಿದರೆ ಆ ಉತ್ಸವಗಳ ಅರ್ಥವೂ ಹೆಚ್ಚಾಗುತ್ತದೆ ಹಾಗೆಯೇ ಸರ್ಕಾರದ ಹಣ ಅನಗತ್ಯವಾಗಿ ಖರ್ಚಾಗುವುದೂ ತಪ್ಪುತ್ತದೆ ಎಂದು ಹೇಳಿದರು.

ಡೊಳ್ಳು ಕುಣಿತ, ಕಂಸಾಳೆ, ಜಗ್ಗಲಿಗೆ, ಕರಡಿ ಮಜಲು, ಹಗಲು ವೇಷ, ಯಕ್ಷಗಾನ, ಹುಲಿ ಕುಣಿತದಂತಹ ನಮ್ಮ ಕನ್ನಡ ಮಣ್ಣಿನ ಕಲೆ ಪ್ರದರ್ಶಿಸುವ ಕಲಾವಿದರಿಗೆ ಅವಕಾಶ ಕೊಟ್ಟರೆ, ನಮ್ಮ ಪರಂಪರೆಯ ಪ್ರದರ್ಶನವೂ ಯುವ ಪೀಳಿಗೆಗೆ ತಲುಪುತ್ತದೆ, ಕಲಾವಿದರಿಗೂ ಅವಕಾಶ ಹಾಗೂ ಗೌರವ ಸಂಭಾವನೆಯೂ ದೊರೆಯುತ್ತದೆ ಎಂದರು.

ನಾಡಿನ ಭವ್ಯ ಪರಂಪರೆ ಹಾಗೂ ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವ ಉತ್ಸವಗಳನ್ನು ಏರ್ಪಡಿಸುವುದು ತುಂಬ ಅವಶ್ಯಕ. ಆದರೆ ಈ ಉತ್ಸವಗಳ ಆಯೋಜನೆ ಅನಗತ್ಯ ಖರ್ಚು ವೆಚ್ಚವಾಗಬಾರದು. ಕಾರ್ಯಕ್ರಮಕ್ಕೆ ಹೆಚ್ಚು ಜನರನ್ನು ಸೇರಿಸಲು ದೊಡ್ಡ ದೊಡ್ಡ ಕಲಾವಿದರಿಗೆ ಹೆಚ್ಚಿನ ವೆಚ್ಚ ಮಾಡಬಾರದು ಎಂದು ಹೇಳಿದರು.

ಸರ್ಕಾರ ಏರ್ಪಡಿಸುವ ಉತ್ಸವಗಳಲ್ಲಿ ಡಿ ಜೆ ಸೌಂಡ್‌ ಸಿಸ್ಟಂನಿಂದ ಆರೋಗ್ಯಕ್ಕೆ ತೊಂದರೆಯಾಗುತ್ತಿದೆ. ಉತ್ಸವಗಳು ಜನರ ಆರೋಗ್ಯದ ಮೇಲೆ ಪರಿಣಾಮ ಬೀರಲು ಅವಕಾಶ ನೀಡಬಾರದು ಎಂದು ಸಚಿವರು, ಹಲವಾರು ಸರ್ಕಾರಿ ಉತ್ಸವಗಳಲ್ಲಿ ನಿಯಮ ಮೀರಿ ಶಬ್ಧ ಮಾಲಿನ್ಯ ಉಂಟು ಮಾಡುವ ಡಿಜೆಗಳನ್ನು, ಸೌಂಡ್ ಸಿಸ್ಟಂಗಳನ್ನು ಬಳಸಲಾಗುತ್ತಿದೆ. ನಾಡಿನ ಭವ್ಯ ಪರಂಪರೆ, ಗತ ಇತಿಹಾಸದ ಮೆಲುಕು ಹಾಕಬೇಕಾದ ಉತ್ಸವಗಳಲ್ಲಿ ಅಶ್ಲೀಲ ಹಾಡುಗಳ ಬಳಕೆ ವ್ಯಾಪಕವಾಗಿದೆ. ಅಲ್ಲದೇ ಆರೋಗ್ಯಕ್ಕೆ ತುಂಬ ಹಾನಿಕಾರಕವಾಗಬಲ್ಲಂತಹ ಇಂತಹ ಸೌಂಡ್ ಸಿಸ್ಟಂಗಳ ಬಳಕೆ ಬಗ್ಗೆ ಕಟ್ಟುನಿಟ್ಟಿನ ಕ್ರಮ ವಹಿಸುವುದು ತುಂಬ ಅವಶ್ಯಕ ಎಂದು ಹೇಳಿದರು.

Related Posts

Leave a Reply

Your email address will not be published. Required fields are marked *