ಬಾತ್ ರೂಮ್ ನಲ್ಲಿ ಬಿದ್ದಿದ್ದ ರಕ್ತದ ಋತುಮತಿಯದ್ದಾಗಿದ್ದು, ಆಕೆ ಯಾರು ಎಂದು ಪತ್ತೆ ಹಚ್ಚಲು 5ರಿಂದ 10ನೇ ತರಗತಿಯ ವಿದ್ಯಾರ್ಥಿನಿಯರನ್ನು ಶಿಕ್ಷಕರು ವಿವಸ್ತ್ರಗೊಳಿಸಿದ ಅಮಾನವೀಯ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಶಹಪೂರ ಜಿಲ್ಲೆಯಲ್ಲಿ ಮಂಗಳವಾರ ಈ ಘಟನೆ ನಡೆದಿದ್ದು, ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಶಾಲೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಶಾಲೆಯ ಬಾತ್ ರೂಮ್ ನಲ್ಲಿ ರಕ್ತದ ಕಲೆಗಳು ಕಂಡು ಬಂದಿವೆ. ಶಾಲೆಯ ಆಡಳಿತ ಮಂಡಳಿ ಋತುಮತಿಯಾದ ವಿದ್ಯಾರ್ಥಿನಿ ಯಾರು ಎಂದು ಪತ್ತೆ ಹಚ್ಚಲು ಇಂತಹ ವಿಪರೀತದ ಕೃತ್ಯಕ್ಕೆ ಇಳಿದಿದ್ದಾರೆ.
ಆರಂಭದಲ್ಲಿ ಶಿಕ್ಷಕರು ಋತುಮತಿ ಆಗಿರುವವರು ಯಾರು ಎಂದು ಪ್ರಶ್ನಿಸಿದ್ದಾರೆ. ಆದರೆ ಬಾಲಕಿಯರು ಹೇಳಿಕೊಳ್ಳಲು ಮುಜುಗರ ಪಟ್ಟುಕೊಂಡಿದ್ದಾರೆ. ಇದರಿಂದ ಕೆಲವರ ಬಟ್ಟೆ ಬಿಚ್ಚಿಸಿದ್ದಾರೆ. ಅದರಲ್ಲೂ ಕೆಲವು ಬಾಲಕಿಯರ ಚೆಡ್ಡಿಯನ್ನು ಕೂಡ ಬಿಚ್ಚಿಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಬದಲು ಹೆಣ್ಣು ಮಕ್ಕಳ ನೈಸರ್ಗಿಕವಾದ ಋತುಮತಿಯನ್ನು ಪರೀಕ್ಷಿಸಿರುವುದು ಅಸಹ್ಯಕರ. ಪ್ರಿನ್ಸಿಪಾರು ಇಂತಹ ಕೆಲಸಗಳಿಗೆ ಕುಮ್ಮಕ್ಕು ನೀಡುತ್ತಿರುವುದು ವಿಷಾದನೀಯ ಎಂದು ಪೋಷಕರು ಆರೋಪಿಸಿದ್ದಾರೆ.
ಶಾಲೆಯ ಆಡಳಿತ ಮಂಡಳಿಯ ನಡವಳಿಕೆಯಿಂದ ಆಘಾತಕ್ಕೆ ಒಳಗಾದ ಬಾಲಕಿಯರು ಮನೆಗೆ ಬಂದ ಕೂಡಲೇ ಪೊಷಕರ ಬಳಿ ದುಃಖ ಹಂಚಿಕೊಂಡಿದ್ದಾರೆ. ಕೂಡಲೇ ಶಾಲೆಗೆ ಆಗಮಿಸಿದ ಪೋಷಕರು ಶಿಕ್ಷಕರ ವಿರುದ್ಧ ಪ್ರತಿಭಟನೆ ನಡೆಸಿದ್ದೂ ಅಲ್ಲದೇ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಶಹಪೂರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.