ಉತ್ತರಾಖಂಡ ಬಿಜೆಪಿ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ರೇಖಾ ಆರ್ಯ ಅವರ ಪತಿ ಗಿರ್ದಾರ್ ಲಾಲ್ ಸಾಹು ನೀಡಿರುವ ಸ್ತ್ರೀವಿರೋಧಿ ಹೇಳಿಕೆಯು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.
ಅಲ್ಮೋರಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಚಿವೆ ರೇಖಾ ಆರ್ಯ ಅವರ ಪತಿ ಸಾಹು ಮಾತನಾಡುತ್ತಾ, ನನ್ನೊಂದಿಗೆ ಬನ್ನಿ, ನಾನು ನಿಮಗೆ ಮದುವೆ ಮಾಡಿಸುತ್ತೇನೆ, ಬಿಹಾರದಲ್ಲಿ 20,000 ರಿಂದ 25,000 ರೂಪಾಯಿಗಳಿಗೆ ಹುಡುಗಿಯರು ಸಿಗುತ್ತಾರೆ ಎಂದು ಹೇಳಿದ್ದರು.ಅಂಕಿತಾ ಭಂಡಾರಿ ಕೊಲೆ ಪ್ರಕರಣದಲ್ಲಿ ಈಗಾಗಲೇ ಟೀಕೆಗಳನ್ನು ಎದುರಿಸುತ್ತಿರುವ ಉತ್ತರಾಖಂಡದ ಬಿಜೆಪಿ ಸರ್ಕಾರಕ್ಕೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ.
ಈ ಹೇಳಿಕೆಯು ವಿವಾದಕ್ಕೀಡಾದ ಬೆನ್ನಲ್ಲೇ, ಸಾಹು ವೀಡಿಯೊ ಬಿಡುಗಡೆ ಮಾಡಿ, ತಮ್ಮ ಮಾತುಗಳನ್ನು ತಿರುಚಲಾಗಿದೆ ಮತ್ತು ತಪ್ಪಾಗಿ ಬಿಂಬಿಸಲಾಗಿದೆ ಎಂದಿದ್ದಾರೆ. ಇದಕ್ಕೆ ವಿರೋಧ ಪಕ್ಷಗಳೇ ಕಾರಣ ಎಂದು ದೂರಿದ್ದಾರೆ. ಮಹಿಳೆಯರೂ ಭಾಗ ವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದೆ, ನನ್ನ ಸ್ನೇಹಿತನೊಬ್ಬನ ಮದುವೆಯ ಬಗ್ಗೆ ಪ್ರಸ್ತಾಪಿಸಿದ್ದೆ. ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷದ ನಾಯಕರು ಆ ಚರ್ಚೆಯನ್ನು ತಿರುಚಿ ಮಾಧ್ಯಮಗಳ ಮುಂದೆ ಮಂಡಿಸಿದ್ದಾರೆ ಎಂದು ಸಾಹು ಸಮರ್ಥಿಸಿಕೊಂಡಿದ್ದಾರೆ. ತಮಗೆ ಮಹಿಳೆಯರ ಬಗ್ಗೆ ಅತ್ಯಂತ ಗೌರವವಿದೆ ಎಂದು ಹೇಳಿದ್ದಾರೆ.
ಸಾಹು ಹೇಳಿಕೆಯ ವಿರುದ್ಧ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳು ಬಿಜೆಪಿ ಮೇಲೆ ತೀವ್ರ ವಾಗ್ದಾಳಿ ನಡೆಸುತ್ತಿವೆ. ಬಿಹಾರದ ಬಿಜೆಪಿ ನಾಯಕರು ಕೂಡ ಸಾಹು ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಹಾರ ಬಿಜೆಪಿ ವಕ್ತಾರ ಪ್ರಭಾಕರ್ ಮಿಶ್ರಾ ಅವರು ಈ ಹೇಳಿಕೆ ಬಿಹಾರದ ಮಹಿಳೆಯರಿಗೆ ಮಾತ್ರವಲ್ಲದೆ ಇಡೀ ದೇಶಕ್ಕೇ ಮಾಡಿದ ಅವಮಾನ, ಈ ಹೇಳಿಕೆ ನೀಡಿದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಬಿಹಾರ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ರಾಮ್, ಬಿಹಾರದ ಜನರನ್ನು ಗೌರವಿಸದಿರುವುದು ಬಿಜೆಪಿಯ ಸ್ವಭಾವ. ಬಿಹಾರದ ಮಹಿಳೆಯರ ಬಗ್ಗೆ ಇಂತಹ ಭಾಷೆಯನ್ನು ಬಳಸಲಾಗುತ್ತಿದೆ. ಬಿಹಾರ ಇದನ್ನು ಸಹಿಸುವುದಿಲ್ಲ. ಸಾಹು ಅವರು ಬಿಹಾರದ ಜನತೆಯ ಕ್ಷಮೆ ಯಾಚಿಸಬೇಕು ಆಗ್ರಹಿಸಿದ್ದಾರೆ.
ಉತ್ತರಾಖಂಡ ಮಹಿಳಾ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷೆ ಜ್ಯೋತಿ ರೌಟೇಲಾ ಅವರು ಸಾಹು ಕ್ಷಮೆ ಯಾಚನೆಗೆ ಆಗ್ರಹಿಸಿದ್ದಾರೆ. ಉತ್ತರಾಖಂಡ ಸಚಿವೆ ರೇಖಾ ಆರ್ಯ ಅವರ ಪತಿ ನಾಚಿಕೆಗೇಡಿನ ಹೇಳಿಕೆ ನೀಡಿದ್ದಾರೆ. ಅವರು ಕ್ಷಮೆ ಯಾಚಿಸಲೇಬೇಕು ಒತ್ತಾಯಿಸಿದ್ದಾರೆ. ಕಾಂಗ್ರೆಸ್ ವಕ್ತಾರರಾದ ಸುಜಾತಾ ಪಾಲ್ ಅವರು ಸಾಹು ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ. ಬಿಹಾರದಲ್ಲಿ 20,000 ರಿಂದ 25,000 ರೂಪಾಯಿಗಳಿಗೆ ಹುಡುಗಿಯರು ಸಿಗುತ್ತಾರೆ ಎಂಬ ಸಾಹು ಅವರ ಹೇಳಿಕೆ ಆಘಾತಕಾರಿ. ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಬೇಕು. ಈ ಹುಡುಗಿಯರು ಯಾರು ಹಾಗೂ ಇಂತಹ ಅಪರಾಧಗಳಲ್ಲಿ ಅವರ ಪಾಲ್ಗೊಳ್ಳುವಿಕೆ ಇದೆಯೇ ಎಂಬುದನ್ನು ಪತ್ತೆಹಚ್ಚಲು ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಬೇಕಲ್ಲವೇ ಎಂಬ ಗಂಭೀರ ಪ್ರಶ್ನೆಗಳು ಉದ್ಭವಿಸುತ್ತವೆ ಎಂದು ಹೇಳಿದ್ದಾರೆ.
ಹಲವಾರು ಕಾಂಗ್ರೆಸ್ ನಾಯಕರು “ಸ್ತ್ರೀವಿರೋಧಿ ಮನಸ್ಥಿತಿಯ” ಪ್ರತಿಬಿಂಬ ಎಂದು ಕರೆದಿದ್ದಾರೆ. ಮಹಿಳಾ ಸಬಲೀಕರಣದ ಜವಾಬ್ದಾರಿ ಹೊತ್ತಿರುವ ಸಚಿವರೇ ಇಂತಹ ಭಾಷೆ ಬಳಸುವ ಕುಟುಂಬದಿಂದ ಬಂದಿರುವಾಗ, ಆ ಸರ್ಕಾರವು ರಾಜ್ಯದ ಮಹಿಳೆಯರ ಘನತೆ ಮತ್ತು ಸುರಕ್ಷತೆಯನ್ನು ಕಾಪಾಡುತ್ತದೆ ಎಂದು ಹೇಗೆ ತಾನೇ ಹಕ್ಕು ಮಂಡಿಸಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಬಿಹಾರದ ರಾಷ್ಟ್ರೀಯ ಜನತಾ ದಳ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಬಿಹಾರದ ಮಹಿಳೆಯರ ಬಗ್ಗೆ “ಅಸಹ್ಯಕರ” ಧೋರಣೆಗಳು ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಸಂಬಂಧಿಸಿದ ಜನರಲ್ಲಿ ಕಂಡುಬರುತ್ತಿವೆ ಎಂದು ಆರೋಪಿಸಿದೆ. ಬಿಜೆಪಿಯ ಮೌನವು ಅನೇಕ ವಿಷಯಗಳನ್ನು ಹೇಳುತ್ತಿದೆ ಎಂದು ತಿಳಿಸಿರುವ ಆರ್‌ಜೆಡಿ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಂದ ಸ್ಪಷ್ಟನೆ ಕೇಳಿದೆ.
“ನಾವು ಬಿಹಾರದಿಂದ ಹುಡುಗಿಯನ್ನು ಕರೆತರುತ್ತೇವೆ, ಬಿಹಾರದಲ್ಲಿ ಕೇವಲ 20-25 ಸಾವಿರ ರೂಪಾಯಿಗಳಿಗೆ ಹುಡುಗಿ ಸಿಗುತ್ತಾರೆ,”. ಇದು ಬಿಹಾರದ ಮಹಿಳೆಯರ ಬಗ್ಗೆ ಬಿಜೆಪಿ ಬೆಂಬಲಿಗರು ಮತ್ತು ಆರ್‌ಎಸ್‌ಎಸ್ ಸದಸ್ಯರು ಹೊಂದಿರುವ ಅಸಹ್ಯಕರ ಮನಸ್ಥಿತಿ. ಪ್ರಧಾನಿ ಮತ್ತು ಗೃಹ ಸಚಿವರು ಬಿಜೆಪಿ ಪರವಾಗಿ ಸ್ಪಷ್ಟನೆ ನೀಡಬೇಕು ಎಂದಿದೆ.


