ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ವ್ಯಕ್ತಿಯೊಬ್ಬರು ವಿಶೇಷ ತನಿಖಾ ತಂಡದ ಎದುರು ಆಗಮಿಸಿ, ತಾನು 15 ವರ್ಷದ ಹಿಂದೆ ಬಾಲಕಿಯೊಬ್ಬಳ ಮೃತದೇಹವನ್ನು ಧರ್ಮಸ್ಥಳದಲ್ಲಿ ಕಂಡಿದ್ದಾಗಿ ಹೇಳಿಕೆ ನೀಡಿದ್ದಾರೆ. ಯಾವುದೇ ತನಿಖೆ ನಡೆಸದೆ ಶವವನ್ನು ರಹಸ್ಯವಾಗಿ ಹೂತು ಹಾಕಲಾಗಿದೆ, ಹೂತಿಟ್ಟ ಸ್ಥಳವನ್ನು ತೋರಿಸಲು ಸಿದ್ಧ ಎಂದು ಜಯಂತ್ ಟಿ. ಎಂಬವರು ತಿಳಿಸಿದ್ದಾರೆ.
ಜಯಂತ್ ಟಿ, ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಬಂದು ತಾನು 2010ರಲ್ಲಿ ಧರ್ಮಸ್ಥಳದಲ್ಲಿ ಬಾಲಕಿಯೊಬ್ಬಳ ಮೃತದೇಹವನ್ನು ಕಂಡಿದ್ದಾಗಿ ಹೇಳಿದ್ದಾರೆ. ಶವವನ್ನು ರಹಸ್ಯವಾಗಿ ಹೂತಿಟ್ಟು, ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಲಾಗಿದೆ. ಹೂತಿಟ್ಟಿರುವ ಸ್ಥಳ ತನಗೆ ಗೊತ್ತಿದ್ದು ಎಸ್‌ಐಟಿಗೆ ಆ ಸ್ಥಳ ತೋರಿಸಲು ಸಿದ್ಧನಿರುವುದಾಗಿ ಹೇಳಿದ್ದಾರೆ.
ತನ್ನ ಕುಟುಂಬದ ಸದಸ್ಯೆಯಾದ ಪದ್ಮಲತಾ ಎಂಬಾಕೆಗೆ ಈ ಹಿಂದೆ ನ್ಯಾಯ ಸಿಗದ ಕಾರಣ, ಆಗಿನ ಸಂದರ್ಭದಲ್ಲಿ ಪೊಲೀಸರಿಂದ ನ್ಯಾಯ ದೊರೆಯುವ ವಿಶ್ವಾಸವಿರಲಿಲ್ಲ. ಆದರೆ ಈಗ ರಾಜ್ಯ ಸರ್ಕಾರ ರಚಿಸಿರುವ ಎಸ್‌ಐಟಿ ಮೇಲೆ ವಿಶ್ವಾಸ ಇಟ್ಟು ತಾನು ಕಣ್ಣಾರೆ ಕಂಡ ಘಟನೆಯ ಬಗ್ಗೆ ದೂರು ಸಲ್ಲಿಸುತ್ತಿರುವುದಾಗಿ ಜಯಂತ್ ಹೇಳಿದ್ದಾರೆ. ಈ ದೂರು ಧರ್ಮಸ್ಥಳದಲ್ಲಿ ನಡೆದಿರುವ ಆರೋಪಿತ ಕೊಲೆಗಳು ಮತ್ತು ಶವಗಳ ರಹಸ್ಯ ಸಮಾಧಿಯ ಬಗ್ಗೆ ಮತ್ತಷ್ಟು ತನಿಖೆಗೆ ಒತ್ತಾಯಿಸಿದೆ. ಜಯಂತ್ ಟಿ. ಸಲ್ಲಿಸಿದ ದೂರನ್ನು ಎಸ್‌ಐಟಿ ಅಧಿಕಾರಿಗಳು ತಕ್ಷಣ ಸ್ವೀಕರಿಸಲು ನಿರಾಕರಿಸಿದ್ದಾರೆ. ಲಿಖಿತ ದೂರನ್ನು ಧರ್ಮಸ್ಥಳ ಪೊಲೀಸ್ ಠಾಣೆಗೆ ಸಲ್ಲಿಸುವಂತೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣ ಸಂಬಂಧ ಎಸ್‌ಐಟಿ ತಂಡವು ತನಿಖೆ ತೀವ್ರಗೊಳಿಸುತ್ತಿದ್ದು, ಜಯಂತ್ ತೋರಿಸುವ ಸ್ಥಳಗಳಲ್ಲಿ ಶವಗಳ ಉತ್ಖನನಕ್ಕೆ ಸಿದ್ಧತೆ ನಡೆಸುತ್ತಿದೆ. ಈಗಾಗಲೇ ಮೊದಲ ದೂರುದಾರ ಮಾಜಿ ಶೌಚಾಲಯ ಕಾರ್ಮಿಕನೊಬ್ಬ ತಾನು 1995ರಿಂದ 2014ರವರೆಗೆ 100ಕ್ಕೂ ಹೆಚ್ಚು ಶವಗಳನ್ನು ಹೂತಿಟ್ಟಿರುವುದಾಗಿ ಆರೋಪಿಸಿದ್ದು, ಶವಗಳಿಗಾಗಿ ಆತ ಸೂಚಿಸಿದ ಪಾಯಿಂಟ್‌ಗಳಲ್ಲಿ ಅಗೆಯಲಾಗುತ್ತಿದೆ. ಜಯಂತ್ ದೂರಿನಿಂದ ತನಿಖೆಗೆ ಹೊಸ ದಿಕ್ಕು ಸಿಗುವ ಸಾಧ್ಯತೆಯಿದೆ.