ತಾಯಿ ಜತೆ ಜಗಳ ಮಾಡಿಕೊಂಡು ಮನೆ ಬಿಟ್ಟು ಬಂದಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಹಣ್ಣು ವ್ಯಾಪಾರಿಯೊಬ್ಬ ತಿರುಪತಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದು, ಆತನ ವಿರುದ್ಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಸಂತ್ರಸ್ತೆಯ ತಾಯಿ ನೀಡಿದ ದೂರು ಆಧರಿಸಿ ಬಂಗಾರಪೇಟೆ ಮೂಲದ ಸುನೀಲ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯು ಮೆಜೆಸ್ಟಿಕ್‌ನಲ್ಲಿ ತಳ್ಳುವ ಗಾಡಿನಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಾನೆ. ಬಾಲಕಿ ಮೆಜೆಸ್ಟಿಕ್‌ಗೆ ಬಂದಿದ್ದಾಗ ಪುಸಲಾಯಿಸಿ ತಿರುಪತಿಗೆ ಕರೆದುಕೊಂಡು ಹೋಗಿದ್ದ. ಉಪ್ಪಾರಪೇಟೆ ಪೊಲೀಸರು ಆರೋಪಿಯ ಬಂಧನಕ್ಕೆ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಬಾಲಕಿ ದಾವಣಗೆರೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಆಕೆಯ ತಾಯಿ ಬೆಂಗಳೂರಿನ ಸರ್ಕಾರಿ ಸ್ವಾಮ್ಯದ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ತಾಯಿಯ ಅನಾರೋಗ್ಯ ಕಾರಣ ಆರೈಕೆ ಮಾಡಲು ಒಂದೂವರೆ ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದಳು. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಆರೋಪಿ ಸುನೀಲ್‌ನ ಪರಿಚಯವಾಗಿದೆ. ಮಾ.13ರಂದು ಬಾಲಕಿ ತಾಯಿ ಜತೆಗೆ ಜಗಳ ಮಾಡಿಕೊಂಡು ಮನೆ ಬಿಟ್ಟು ಮೆಜೆಸ್ಟಿಕ್‌ಗೆ ಬಂದು ಸುನೀಲ್‌ನನ್ನು ಭೇಟಿಯಾಗಿ ದ್ದಾಳೆ.
ಆರೋಪಿಯ ಆಕೆಯನ್ನು ತಿರುಪತಿಗೆ ಕರೆದೊಯ್ದು ದೇವರ ದರ್ಶನ ಮಾಡಿಸಿ ಬಳಿಕ ಮೂರು ದಿನ ಲಾಡ್ಜ್‌ನಲ್ಲಿ ಇರಿಸಿ ಅತ್ಯಾಚಾರ ಮಾಡಿದ್ದಾನೆ. ಮಾ.16ರಂದು ಬೆಂಗಳೂರಿಗೆ ಕರೆತಂದು ಬಿಟ್ಟಿದ್ದಾನೆ. ಬಳಿಕ ಮನೆಗೆ ತೆರಳಿದ ಬಾಲಕಿಯನ್ನು ತಾಯಿ ಪ್ರಶ್ನಿಸಿದಾಗ, ಸುನೀಲ್ ಅತ್ಯಾಚಾರ ಮಾಡಿರುವ ವಿಚಾರವನ್ನು ಹೇಳಿ ದ್ದಾಳೆ. ತಾಯಿ ರಾಜಾಜಿನಗರ ಠಾಣೆಗೆ ಬಂದು ಸುನೀಲ್ ವಿರುದ್ಧ ದೂರು ನೀಡಿದ್ದಾರೆ.