ಮಹಾರಾಷ್ಟ್ರದ ವಸೈಯಲ್ಲಿರುವ ಶಾಲೆಗೆ ಮಕ್ಕಳ ದಿನಾಚರಣೆಯಂದು ತಡವಾಗಿ ಬಂದಿದ್ದಕ್ಕೆ ಶಿಕ್ಷಕಿ ನೀಡಿದ ಶಿಕ್ಷೆಗೆ ಆರನೇ ತರಗತಿ ವಿದ್ಯಾರ್ಥಿನಿ ಬಲಿಯಾಗಿರುವ ಘಟನೆಯೊಂದು ನಡೆದಿದೆ.
ವಸೈನಲ್ಲಿರುವ ಶ್ರೀ ಹನುಮಂತ್ ವಿದ್ಯಾಮಂದಿರ ಪ್ರೌಢಶಾಲೆಯಲ್ಲಿ ಶುಕ್ರವಾರ 12 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ವಿದ್ಯಾರ್ಥಿನಿ ಹತ್ತು ನಿಮಿಷ ತಡವಾಗಿ ಬಂದಿದ್ದಕ್ಕೆ ಶಿಕ್ಷಕಿ100 ಸಿಟಪ್ಸ್ ಶಿಕ್ಷೆ ನೀಡಿದ್ದರು. ಘಟನೆ ಕುರಿತು ಶಿಕ್ಷಣ ಇಲಾಖೆ ತನಿಖೆಗೆ ಆದೇಶಿಸಿದೆ.
ಆರನೇ ತರಗತಿಯಲ್ಲಿ ಓದುತ್ತಿದ್ದ ಕಾಜಲ್ ಗೊಂಡ್ ಮೃತಪಟ್ಟ ಬಾಲಕಿ. ಶಾಲೆಗೆ ತಡವಾಗಿ ಬಂದಿದ್ದಕ್ಕೆ ಶಿಕ್ಷಕಿ 100 ಸಿಟಪ್ಸ್ ಮಾಡಲು ಹೇಳಿದ್ದರು. ಶಿಕ್ಷೆ ಮುಗಿದ ನಂತರ ವಿದ್ಯಾರ್ಥಿನಿ ಬೆನ್ನು ನೋವು ಎಂದು ಹೇಳಿದ್ದು, ನಂತರ ಕುಸಿದು ಬಿದ್ದಳು. ತಕ್ಷಣವೇ ಆಕೆಯನ್ನು ನಲಸೋಪಾರ ಆಸ್ಪತ್ರೆಗೆ ದಾಖಲಿಸಲಾಯಿತು. ಆರೋಗ್ಯ ಸ್ಥಿತಿ ಬಿಗಡಾಯಿಸಿದ ಕಾರಣ ಮುಂಬೈನ ಜೆಜೆ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಾಜಲ್ ಮೃತಪಟ್ಟಿದ್ದಾಳೆ.
ಶಿಕ್ಷಕಿ ನೀಡಿದ ಶಿಕ್ಷೆಯಿಂದಲೇ ಮಗಳು ಮೃತಪಟ್ಟಿರುವುದಾಗಿ ಬಾಲಕಿಯ ಪೋಷಕರು ಆರೋಪಿಸಿದ್ದಾರೆ. ನೂರು ಸಿಟಪ್ಸ್ ಮಾಡುವಾಗಲೂ ಶಿಕ್ಷಕಿ ಮಗುವಿನ ಹೆಗಲಿನಿಂದ ಸ್ಕೂಲ್ ಬ್ಯಾಗ್ ತೆಗೆಯಲು ಬಿಡಲಿಲ್ಲ ಎಂದು ದೂರಿದ ಪೋಷಕರು ಮತ್ತು ಸಂಬಂಧಿಕರು ಶಾಲೆಗೆ ಬಂದು ಪ್ರತಿಭಟನೆ ನಡೆಸಿದರು.
ಶಿಕ್ಷಕಿ ಮತ್ತು ಶಾಲೆಯ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ನಡೆದ ಪ್ರತಿಭಟನೆಯನ್ನು ಪೊಲೀಸರು ನಿಲ್ಲಿಸಿದರು. ಈ ಘಟನೆಗೆ ಸಂಬಂಧಿಸಿದಂತೆ ಕ್ರಿಮಿನಲ್ ಪ್ರಕರಣ ದಾಖಲಾಗುವವರೆಗೂ ಶಾಲೆ ತೆರೆಯಲು ಬಿಡುವುದಿಲ್ಲ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ ಎಚ್ಚರಿಕೆ ನೀಡಿದೆ.


