“ನೀವು ಸರ್ಕಾರಿ ಶಾಲೆಯಲ್ಲೇ ಓದುತ್ತಿರಲಿ, ಖಾಸಗಿ ಶಾಲೆಯಲ್ಲೇ ಓದುತ್ತಿರಲಿ. ನಿಮ್ಮ ಜೀವನದಲ್ಲಿ ಎಂದಿಗೂ ಆತ್ಮ ವಿಶ್ವಾಸ ಕಳೆದುಕೊಳ್ಳಬೇಡಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.
ಮಲಬಾರ್ ಚಾರಿಟಬಲ್ ಟ್ರಸ್ಟಿನ ವಿದ್ಯಾರ್ಥಿ ವೇತನ ಘೋಷಣಾ ಕಾರ್ಯಕ್ರಮದಲ್ಲಿ ಶಿವಕುಮಾರ್ ಮಾತನಾಡಿ, “ಶಿಕ್ಷಣ ನನ್ನ ಅಚ್ಚುಮೆಚ್ಚಿನ ಕ್ಷೇತ್ರ. ನಾನು ಹುಟ್ಟುತ್ತಾ ಕೃಷಿಕ, ವೃತ್ತಿಯಲ್ಲಿ ಉದ್ಯಮಿ, ಆಯ್ಕೆಯಲ್ಲಿ ಶಿಕ್ಷಣತಜ್ಞ, ಆಸಕ್ತಿಯಲ್ಲಿ ನಾನು ರಾಜಕಾರಣಿ. ನಾನು ನಿಮಗಿಂತ ಚಿಕ್ಕ ವಯಸ್ಸಿನಲ್ಲಿ ರಾಜಕೀಯ ಪ್ರವೇಶ ಮಾಡಿದೆ. ನಾನು ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವಾಗಲೇ ನನಗೆ ವಿಧಾನಸಭೆ ಟಿಕೆಟ್ ಸಿಕ್ಕಿತು. ನಾನು 1985ರಿಂದ ವಿಧಾನಸಭೆ ಸ್ಪರ್ಧಿಸಿದೆ. ಚಿಕ್ಕ ವಯಸ್ಸಿಗೆ ಮಂತ್ರಿಯೂ ಆದೆ. 9 ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ನಾನು ವಿಧಾನಸಭೆಯಲ್ಲಿ ಮೊದಲ ಬಾರಿಗೆ ಹೋಗಿ ಭಾಷಣ ಮಾಡಲು ಮುಂದಾದಾಗ, ದೊಡ್ಡ ಘಟಾನುಘಟಿಗಳಿದ್ದರು. ಶಿಕ್ಷಣಕ್ಕೆ ಆಸಕ್ತಿ ತೋರದ ಕಾರಣ ಅವರ ಮುಂದೆ ಮಾತನಾಡಲು ಹಿಂಜರಿಯುತ್ತಿದ್ದೆ” ಎಂದು ಹೇಳಿದರು.
46ನೇ ವಯಸ್ಸಿಗೆ 2007ರಲ್ಲಿ ನಾನು ಪದವಿ ಪಡೆದೆ. ಸಚಿವನಾದಾಗ ಸಿಕ್ಕ ಸಂತೋಷಕ್ಕಿಂತ, ನಾನು ಪದವಿ ಪಡೆದಾಗ ಹೆಚ್ಚು ಸಂತೋಷವಾಯಿತು” ಎಂದು ತಿಳಿಸಿದರು. “ನೀವು ಸಂಪಾದಿಸುವ ಆಸ್ತಿ ಉಳಿಯುವುದಿಲ್ಲ. ದಾಯದಿ ದಕ್ಕಿಸದ, ನೀರಿನಲ್ಲಿ ನೆನೆಯದ, ಅಗ್ನಿಯಲ್ಲಿ ಸುಡದ ಒಂದು ಗುಪ್ತ ನಿಧಿ ಎಂದರೆ ಅದು ವಿದ್ಯೆ. ನೀವು ಸಂಪಾದಿಸಿದ ಜ್ಞಾನವನ್ನು ಯಾರೂ ಕದಿಯಲು ಸಾಧ್ಯವಿಲ್ಲ. ಮಲಬಾರ್ ಎಜುಕೇಷನ್ ಸಂಸ್ಥೆ ನನಗೆ ಬಹಳ ಅಚ್ಚುಮೆಚ್ಚಿನ ಕೆಲಸ ಮಾಡುತ್ತಿದೆ. ಮಲಬಾರ್ ಸಂಸ್ಥೆಯವರು ತಮ್ಮ ಸಿಎಸ್ಆರ್ ನಿಧಿ ಮೂಲಕ 200 ಕೋಟಿಯಷ್ಟು ಹಣವನ್ನು ದಾನ ಮಾಡಲು ಮುಂದಾಗಿದ್ದಾರೆ. ಹೆಣ್ಣುಮಕ್ಕಳಿಗೆ ನೆರವಾಗಲು ಮುಂದಾಗಿದ್ದಾರೆ” ಎಂದರು.
ಮಹಿಳೆಯರಿಗೆ ಆದ್ಯತೆ ನೀಡುವುದು ಈ ದೇಶದ ಸಂಸ್ಕೃತಿ. ನಮ್ಮ ಸರ್ಕಾರದ ಯೋಜನೆಗಳು ಕೂಡ ಮಹಿಳೆಯರ ಮೇಲೆ ಕೇಂದ್ರೀಕೃತವಾಗಿದೆ” ಎಂದು ತಿಳಿಸಿದರು. “ಮಲಬಾರ್ ಸಂಸ್ಥೆಯವರು ಅನೇಕ ಕಾರ್ಯಕ್ರಮ ರೂಪಿಸಿದ್ದು, ಈ ಸಂಸ್ಥೆಯವರು ಮಾಡಿರುವ ಕಾರ್ಯ ಶ್ಲಾಘನೀಯ. ನೆಹರೂ ಅವರು ಮಕ್ಕಳ ಮನಸು ನಿಷ್ಕಲ್ಮಶವಾಗಿದ್ದು ಅವರು ಆಶೀರ್ವಾದ ಮಾಡಿದರೆ ದೇವರು ಆಶೀರ್ವಾದ ಮಾಡಿದಂತೆ. ಹೀಗಾಗಿ ಅವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯಾಗಿ ಮಾಡುತ್ತಿದ್ದೇವೆ” ಎಂದರು.
“ಇಲ್ಲಿರುವ ಎಲ್ಲಾ ಮಕ್ಕಳು ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡಬೇಕು. ನಿಮಗಿರುವ ಸೌಲಭ್ಯಗಳು ನಿಮ್ಮ ಶಿಕ್ಷಕರಿಗಿಂತ ಹೆಚ್ಚಿನ ಮಾಹಿತಿ ನೀಡುತ್ತವೆ. ನಿಮ್ಮ ಜೀವನದ ಪ್ರತಿ ಹಂತದಲ್ಲೂ ನಿಮ್ಮ ಮೇಲೆ ದೃಢ ನಂಬಿಕೆ ಇರಬೇಕು. ಶಿಸ್ತು ಇರಬೇಕು. ಆಗ ನೀವು ಯಶಸ್ಸು ಸಾಧಿಸಲು ಸಾಧ್ಯ. ನೀವು ನಾಲ್ಕು ಜನಕ್ಕೆ ಉದ್ಯೋಗ ನೀಡುವ ಗುರಿ ಇಟ್ಟುಕೊಳ್ಳಿ. ದೊಡ್ಡ ಮಟ್ಟದಲ್ಲಿ ಅಲ್ಲದಿದ್ದರೂ ಸಣ್ಣಮಟ್ಟದಲ್ಲಿ ನಾಲ್ಕು ಜನರಿಗೆ ಉದ್ಯೋಗ ಸೃಷ್ಟಿಸುವಂತೆ ನೀವು ಬೆಳೆಯಬೇಕು. ನೀವು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದೇವೆ ಎಂದು ಹಿಂಜರಿಯುವುದು ಬೇಡ. ಕಳೆದ ವರ್ಷ 10ನೇ ತರಗತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದು, ಬೆಂಗಳೂರಿನ ವಿದ್ಯಾರ್ಥಿಯಲ್ಲ, ಬಾಗಲಕೋಟೆಯ ಮೊರಾರ್ಜಿ ದೇಸಾಯಿ ಶಾಲೆಯ ವಿದ್ಯಾರ್ಥಿನಿ ಎಂದು ಆತ್ಮವಿಶ್ವಾಸ ತುಂಬಿದರು.
“ಮಲಬಾರ್ ಸಂಸ್ಥೆಯವರು 21 ಸಾವಿರ ಜನರಿಗೆ ಉದ್ಯೋಗ ನೀಡಿದ್ದಾರೆ. ನೀವು ನಿಮ್ಮ ಮೂಲವನ್ನು ಮರೆಯಬಾರದು. ಮರೆತರೆ ನೀವು ಯಶಸ್ಸು ಸಾಧಿಸುವುದಿಲ್ಲ. ನಿಮ್ಮ ತಂದೆ ತಾಯಿ, ಶಿಕ್ಷಕರು, ನಿಮಗೆ ಸಹಾಯ ಮಾಡಿದವರನ್ನು ನೀವು ಎಂದೂ ಮರೆಯುವಂತಿಲ್ಲ. ಮೆಟ್ಟಿಲು ಹತ್ತಿದ ನಂತರ ಅದನ್ನು ಒದೆಯಬಾರದು. ದೇವರು ವರವನ್ನೂ ನೀಡುವುದಿಲ್ಲ, ಶಾಪವನ್ನು ನೀಡುವುದಿಲ್ಲ. ಕೇವಲ ಅವಕಾಶ ಮಾತ್ರ ನೀಡುತ್ತಾನೆ. ಸಿಗುವ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕು. ಈ ಸಮಯದಲ್ಲಿ ನೀವು ನಿಮ್ಮ ಗಮನವನ್ನು ಕೇಂದ್ರೀಕರಿಸಿಕೊಳ್ಳಬೇಕು. ನೀವು ನಿಮ್ಮ ಮನಸ್ಸನ್ನು ನಿಯಂತ್ರಿಣದಲ್ಲಿಟ್ಟುಕೊಂಡಷ್ಟು ಯಶಸ್ಸು ಸಾಧಿಸುತ್ತೀರಿ” ಎಂದು ತಿಳಿಸಿದರು.
ನಿಮ್ಮ ಜೀವನದಲ್ಲಿ ಸಮಾಜಕ್ಕೆ ಏನು ಕೊಡುಗೆ ನೀಡುತ್ತೀರಿ ಎಂಬುದು ಮುಖ್ಯ. ಮಲಬಾರ್ ಸಂಸ್ಥೆಯವರ ಈ ಕಾರ್ಯವನ್ನು ನಾವೆಲ್ಲರೂ ಪ್ರಶಂಸಿಸಬೇಕು” ಎಂದರು. “ಹಿಂದೆ ಏನಾಗಿದೆ ಎಂದು ಚಿಂತಿಸಬೇಡಿ, ನಾಳೆ ಏನಾಗಲಿದೆ ಗೊತ್ತಿಲ್ಲ. ಇಂದಿನ ಸಮಯವನ್ನು ವ್ಯರ್ಥ ಮಾಡಿಕೊಳ್ಳಬೇಡಿ. ನಿಮ್ಮ ಆತ್ಮವಿಶ್ವಾಸ ಎಂದಿಗೂ ಕುಗ್ಗಬಾರದು. ನೀವು ಕೂಡ ಡಿ.ಕೆ. ಶಿವಕುಮಾರ್, ಎನ್.ಎ ಹ್ಯಾರೀಸ್ ಆಗಬೇಕು. ರಾಜಕೀಯದಲ್ಲಿ ಈಗ ಶೇ.33ರಷ್ಟು ಮೀಸಲಾತಿ ಬಂದ ನಂತರ 224 ಕ್ಷೇತ್ರಗಳಲ್ಲಿ ಸುಮಾರು 70 ಕ್ಷೇತ್ರಗಳು ಮಹಿಳೆಯರಿಗಾಗಿ ಮೀಸಲಿಡಲಾಗುವುದು. ಕೇವಲ ರಾಜಕೀಯದಲ್ಲಿ ಮಾತ್ರವಲ್ಲ, ನೀವು ಆಯ್ಕೆ ಮಾಡಿಕೊಳ್ಳುವ ಕ್ಷೇತ್ರದಲ್ಲೂ ನಾಯಕಿಯರಾಗಿ ಬೆಳೆಯಬೇಕು. ನಾನು ನಮ್ಮ ಪಕ್ಷದಲ್ಲಿ ನಾ ನಾಯಕಿ ಕಾರ್ಯಕ್ರಮ ಮಾಡುತ್ತಿದ್ದೇನೆ. ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ” ಎಂದು ತಿಳಿಸಿದರು.