ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಆಕೆಯ ಚಿಕ್ಕಪ್ಪನೇ ಅತ್ಯಾಚಾರವೆಸಗಿದ್ದು, ಬಾಲಕಿ ಗರ್ಭಿಣಿಯಾಗಿರುವ ಪ್ರಕರಣ ಬಹಿರಂಗಗೊಂಡಿದೆ. ಈ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನಂಜುಂಡಸ್ವಾಮಿ ಅತ್ಯಾಚಾರವೆಸಗಿದ ಆರೋಪಿ. ಶಾಲೆಗೆ ತೆರಳಿದ್ದ ವಿದ್ಯಾರ್ಥಿನಿಯನ್ನು ಮನೆಗೆ ಕರೆದುಕೊಂಡು ಬಂದು ಅತ್ಯಾಚಾರ ಮಾಡಿದ್ದಾನೆ.
10ನೇ ತರಗತಿ ಓದುತ್ತಿದ್ದ ಬಾಲಕಿಗೆ ಎರಡು ತಿಂಗಳಿಂದ ಮುಟ್ಟು ಆಗಿಲ್ಲವೆಂಬ ಕಾರಣಕ್ಕೆ ವೈದ್ಯರು ಪರಿಶೀಲನೆ ನಡೆಸಿದಾಗ ವಿಷಯ ಹೊರ ಬಂದಿದೆ. ಆರೋಪಿ ಜನವರಿಯಲ್ಲಿ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಮನೆಗೆ ಕರೆತಂದು ಬಲವಂತವಾಗಿ ದೈಹಿಕ ಸಂಪರ್ಕ ನಡೆಸಿ ಯಾರಿಗೂ ತಿಳಿಸಬಾರದೆಂದು ಹೇಳಿ ಮತ್ತೆ ಶಾಲೆಗೆ ಬಿಟ್ಟಿದ್ದಾನೆ. ಮುಟ್ಟು ವ್ಯತ್ಯಾಸವಾಗಿದ್ದು, ಹೊಟ್ಟೆ ನೋವಿದೆ ಎಂದು ವೈದ್ಯರ ಬಳಿ ತೆರಳಿದಾಗ ಬಾಲಕಿ 6 ತಿಂಗಳ ಗರ್ಭಿಣಿಯಾಗಿರುವುದು ಗೊತ್ತಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧಿಕಾರಿಗಳು ಬಾಲಕಿಯನ್ನು ವಶಕ್ಕೆ ಪಡೆದಿದ್ದಾರೆ. ನಂಜುಂಡಸ್ವಾಮಿ ವಿರುದ್ದ ಪೋಕ್ಸೋ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯುತ್ತಿರುವುದರಿಂದ ನೊಂದ ಬಾಲಕಿಯನ್ನು ಬಾಲಮಂದಿರದಿಂದ ಪರೀಕ್ಷಾ ಕೇಂದ್ರಕ್ಕೆ ಪೊಲೀಸರ ಭದ್ರತೆ ಯೊಂದಿಗೆ ಕರೆತರಲಾಗುತ್ತಿದೆ ಎಂದು ಹೇಳಲಾಗಿದೆ. ಈ ಸಂಬಂಧ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.