ಗದಗದ ಗಜೇಂದ್ರಗಢ ತಾಲೂಕಿನ ರಾಜೂರು ಗ್ರಾಮದಲ್ಲಿ ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಅಪ್ರಾಪ್ತ ವಯಸ್ಕ ಹುಡುಗಿ ಅಸು ನೀಗಿದ್ದು, ಯುವಕನ ಸ್ಥಿತಿ ಗಂಭೀರವಾಗಿದೆ.
ಜಮೀನಿನಲ್ಲಿ ಕ್ರಿಮಿನಾಶಕ ಸೇವಿಸಿದ್ದ ಇಬ್ಬರನ್ನೂ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಹುಡುಗಿ ಮೃತಪಟ್ಟಿದ್ದಾಳೆ, ದೇವಪ್ಪ ಹಾದಿಮನಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ.
ಬಾಲಕಿ ಮನೆಯಲ್ಲಿ ಕಾಲೇಜಿಗೆ ಹೋಗುವುದಾಗಿ ಹೇಳಿ ಆಟೋ ಚಾಲಕ ದೇವಪ್ಪ ಹಾದಿಮನಿಯ ಜೊತೆಗೆ ಹೋಗಿದ್ದಳು. ಇಬ್ಬರೂ ರಾಜೂರು ಗ್ರಾಮದಿಂದ ಕೆಲವು ಕಿಲೋಮೀಟರ್ ಅಂತರದಲ್ಲಿರುವ ಜಮೀನಿನಲ್ಲಿ ಕ್ರಿಮಿನಾಶಕ ಸೇವಿಸಿದ್ದಾರೆ. ವಿಷ ಸೇವನೆ ಬಳಿಕ ದೇವಪ್ಪ ಸ್ನೇಹಿತರಿಗೆ ಫೋನ್ ಮೂಲಕ ವಿಷಯ ತಿಳಿಸಿದ್ದಾನೆ. ತಕ್ಷಣ ಸ್ಥಳೀಯರು ಸ್ಥಳಕ್ಕೆ ಬಂದು ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸ್ಥಿತಿ ಗಂಭೀರವಾಗಿದ್ದ ಕಾರಣ ಜಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಅಸು ನೀಗಿದ್ದಾಳೆ.
ಈ ಪ್ರೇಮ ಸಂಬಂಧಕ್ಕೆ ಇಬ್ಬರ ಮನೆಯವರ ವಿರೋಧವಿತ್ತು. ಬಾಲಕಿಗೆ ಮನೆಯವರು ಸಂಬಂಧಿಯೊಬ್ಬನ ಜೊತೆ ಮದುವೆ ನಿಶ್ಚಯಿಸಿದ್ದರು. ಇದರಿಂದ ನೊಂದ ಜೋಡಿ ಆತ್ಮಹತ್ಯೆಗೆ ಮುಂದಾಗಿ ವಿಷ ಸೇವಿಸಿದೆ. ಗಜೇಂದ್ರಗಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.