ಬಾಕಿ ಉಳಿಸಿಕೊಂಡ ಬಾಡಿಗೆ ಹಣ ನೀಡುವಂತೆ ಕೇಳಿದ ಮನೆ ಮಾಲೀಕರನ್ನೇ ಕೊಂದ ದಂಪತಿ ಸೂಟ್ ಕೇಸ್ ನಲ್ಲಿ ಶವ ಮುಚ್ಚಿಟ್ಟ ಘಟನೆ ದೆಹಲಿ ಬಳಿಯ ಗಾಜಿಯಾಬಾದ್ ನಲ್ಲಿ ನಡೆದಿದೆ.
ರಾಜ್ ನಗರ ವಿಸ್ತರಣೆಯಲ್ಲಿರುವ ಔರಾ ಚಿಮೇರಾ ವಸತಿ ಸಂಕೀರ್ಣದಲ್ಲಿ ಈ ಘಟನೆ ನಡೆದಿದ್ದು. ಮನೆ ಬಾಡಿಗೆ ಕೇಳಲು ಹೋದ ಮನೆಯ ಒಡತಿ ದೀಪ್ಶಿಕಾ ಶರ್ಮಾ (48) ಅವರನ್ನು ಕೊಲೆ ಮಾಡಿದ ದಂಪತಿಯನ್ನು ಬಂಧಿಸಲಾಗಿದೆ.
ಉಮೇಶ್ ಶರ್ಮಾ ಮತ್ತು ದೀಪ್ಶಿಖಾ ಶರ್ಮಾ ಸೊಸೈಟಿಯಲ್ಲಿ ಎರಡು ಫ್ಲಾಟ್‌ಗಳನ್ನು ಹೊಂದಿದ್ದು ಒಂದರಲ್ಲಿ ದಂಪತಿ ವಾಸಿಸುತ್ತಿದ್ದರೆ, ಇನ್ನೊಂದನ್ನು ಸಾರಿಗೆ ವ್ಯವಹಾರ ನಡೆಸುತ್ತಿದ್ದ ಜಯ್ ಗುಪ್ತಾ ದಂಪತಿಗೆ ಬಾಡಿಗೆಗೆ ನೀಡಿದ್ದರು.
ಬಾಡಿಗೆಗೆ ಇದ್ದ ದಂಪತಿ ಸುಮಾರು ನಾಲ್ಕು ತಿಂಗಳಿನಿಂದ ಬಾಡಿಗೆ ಪಾವತಿಸಿರಲಿಲ್ಲ, ಮತ್ತು ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ದೀಪ್ಶಿಖಾ ಅವರನ್ನು ಬೆದರಿಸಿ ಹಣ ಕೇಳಲು ನಿರ್ಧರಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಗುಪ್ತಾ ದಂಪತಿ ಮನೆಗೆ ಹೋದ ದೀಪ್ಶಿಕಾ ಶರ್ಮ ಹಲವು ಗಂಟೆಗಳಾದರೂ ವಾಪಸ್ ಬರಲಿಲ್ಲ. ಮನೆಕೆಲಸದಾಕೆ ಮೀನಾ ಹುಡುಕಾಟ ನಡೆಸಿದ್ದರು. ಗುಪ್ತಾ ದಂಪತಿ ಮನೆಗೆ ಹೋಗಿ ವಿಚಾರಿಸಿದಾಗ ಅನುಮಾನಸ್ಪದ ರೀತಿಯಲ್ಲಿ ನಡೆದುಕೊಂಡಿದ್ದರು.
ಮೀನಾ ಕಟ್ಟಡದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ದೀಪ್ಶಿಖಾ ಗುಪ್ತಾ ದಂಪತಿಯ ಮನೆಗೆ ಪ್ರವೇಶಿಸಿದ್ದು, ಫ್ಲಾಟ್‌ನಿಂದ ಹೊರಬರದೇ ಇರುವುದು ಕಂಡುಬಂದಿದೆ. ಕೂಡಲೇ ಆಕೆ ಪೊಲೀಸರಿಗೆ ದೂರು ನೀಡಿದ್ದಾರೆ.
ಗುಪ್ತಾ ದಂಪತಿ ದೊಡ್ಡ ಸೂಟ್‌ಕೇಸ್‌ನೊಂದಿಗೆ ಕಟ್ಟಡದಿಂದ ಹೊರಡುತ್ತಿರುವುದು ಕಂಡುಬಂದಿದೆ. ಆಟೋರಿಕ್ಷಾದಲ್ಲಿ ಹೋಗುವಾಗ ಮನೆಕೆಲಸದಾಕೆ ತಡೆದು ದೀಪ್ಶಿಕಾ ಮರಳುವವರೆಗೂ ಎಲ್ಲಿಗೂ ಹೋಗದಂತೆ ತಡೆದರು.
ಪೊಲೀಸರು ಪರಿಶೀಲಿಸಿದಾಗ ದೀಪ್ಶಿಕಾ ಶರ್ಮಾ ಅವರ ದೇಹವು ಸೂಟ್‌ಕೇಸ್‌ನಲ್ಲಿ ಕಂಡು ಬಂದಿತು. ದೀಪ್ಶಿಕಾ ಬಾಡಿಗೆ ಕೇಳಲು ಬಂದಾಗ, ಜಗಳ ನಡೆದು, ಬಾಡಿಗೆದಾರ ದಂಪತಿಗಳು ಅವಳನ್ನು ಕೊಂದು, ದೇಹವನ್ನು ಸೂಟ್‌ಕೇಸ್‌ನಲ್ಲಿ ಇಟ್ಟಿದ್ದರು. ಶವ ಸಾಗಿಸುವ ಮೊದಲೇ ಕೆಲಸದಾಕೆ ಬಂದು ತಡೆದು ನಿಲ್ಲಿಸಿದ್ದರಿಂದ ಅವರ ಯೋಜನೆಗಳೆಲ್ಲಾ ತಲೆಕೆಳಗಾದವು.
“ನಾನು ಮನೆ ಯಜಮಾನಿಗೆ ಬ್ಬಂಟಿಯಾಗಿ ಹೋಗಬೇಡಿ ಎಂದು ಹೇಳಿದ್ದೆ, ಜೊತೆಗೆ ನಾನೂ ಬರುವುದಾಗಿ ಹೇಳಿದ್ದೆ. ಆದರೆ ಅವರು ನನಗೆ ಕಾಯದೇ ಒಬ್ಬರೇ ಹೋಗಿದ್ದರು ಎಂದು ಮೀನಾ ಹೇಳಿದ್ದಾರೆ.
ದೀಪ್ಶಿಕಾಳ ತಲೆಗೆ ಮೊದಲು ಪ್ರೆಶರ್ ಕುಕ್ಕರ್‌ನಿಂದ ಹೊಡೆದು ನಂತರ ದುಪಟ್ಟಾದಿಂದ ಕತ್ತು ಹಿಸುಕಿ ಕೊಲೆ ಮಾಡಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ವಿಚಾರಣೆ ನಡೆಸಿದ್ದಾರೆ.


