ಮಹಾರಾಷ್ಟ್ರ , ಬೆಳಗಾವಿಯಲ್ಲಿ ವ್ಯಾಪಕ ಮಳೆ ಸುರಿಯುತ್ತಿದ್ದು, ಘಟಪ್ರಭಾ ನದಿಯ ಬಾಗಲಕೋಟೆ ರಬಕವಿ ಬನಹಟ್ಟಿ ತಾಲೂಕಿನ ಢವಳೇಶ್ವರ ಸೇತುವೆ ಮುಳುಗಡೆಯಾಗಿದೆ.
ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಸೇತುವೆ ಮೇಲೆ ಒಂದು ಅಡಿಯಷ್ಟು ನೀರು ಹರಿಯುತ್ತಿದೆ. ಇದರಿಂದಾಗಿ ಮಹಾಲಿಂಗಪುರ ಪಟ್ಟಣಕ್ಕೆ 10-15 ಕಿಮೀ ಸುತ್ತಿಕೊಂಡು ಪ್ರಯಾಣ ಮಾಡಬೇಕಿದೆ.
ಘಟಪ್ರಭಾ ನದಿಗೆ 17 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ನಂದಗಾಂವ, ಮಿರ್ಜಿಸೇರಿ ಐದು ಬ್ರಿಡ್ಜ್ ಕಂ ಬ್ಯಾರೇಜ್ ಜಲಾವೃತಗೊಳ್ಳುವ ಆತಂಕವಿದೆ. ನದಿಗೆ ಇಳಿಯದಂತೆ ಜಮಖಂಡಿ ಎಸಿ ಶ್ವೇತಾ ಬೀಡಿಕರ್ ಎಚ್ಚರಿಕೆ ನೀಡಿದ್ದಾರೆ.
ತುಂಗಭದ್ರಾ ಡ್ಯಾಂನಿಂದ 90 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದು, ಹಂಪೆಯ ಹಲವಾರು ಸ್ಮಾರಕಗಳು ಜಲಾವೃತಗೊಂಡಿವೆ. ಕಂಪ್ಲಿ ಪಟ್ಟಣದ ಹನುಮಂತ ದೇವರ ದೇವಸ್ಥಾನಕ್ಕೂ ನೀರು ನುಗ್ಗಿದೆ. ಇನ್ನಷ್ಟು ನೀರು ನದಿಗೆ ಹರಿದರೆ ಕಂಪ್ಲಿ ಪಟ್ಟಣದ ಹಲವಾರು ಮನೆಗಳು ಜಲಾವೃತ ಆಗಲಿವೆ. ನದಿ ಪಾತ್ರದಲ್ಲಿ ಇರುವ ನಾಗರಿಕರಿಗೆ ತುಂಗಭದ್ರಾ ಮಂಡಳಿಯು ಎಚ್ಚರಿಕೆ ವಹಿಸುವಂತೆ ತಿಳಿಸಿದೆ.