ಅಮೃತಸರ: ಉಗ್ರರಿಗೆ ಆಶ್ರಯ ನೀಡಿದರೆ ಮನೆಗೆ ನುಗ್ಗಿ ಹೊಡೆಯುತ್ತೇವೆ. ತಪ್ಪಿಸಿಕೊಳ್ಳಲು ಕೂಡ ಅವಕಾಶ ನೀಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.
ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಬೆನ್ನಲ್ಲೇ ಭಾರತ ಮತ್ತು ಪಾಕಿಸ್ತಾನ ದಾಳಿ ಪ್ರತಿದಾಳಿ ನಂತರ ಕದನ ವಿರಾಮ ಘೋಷಿಸಲಾಯಿತು. ಇದರ ಬೆನ್ನಲ್ಲೇ ಪ್ರಧಾನಿ ಮೋದಿ ಅದಂಪುರ್ ವಾಯುನೆಲೆಗೆ ಭೇಟಿ ನೀಡಿದ್ದಾರೆ.
ವಾಯುನೆಲೆಯಲ್ಲಿ ಯೋಧರನ್ನು ಉದ್ದೇಶಿಸಿ ಭಾಷಣ ಮಾಡಿದ ಅವರು, ಪಾಕಿಸ್ತಾನ ಮತ್ತೊಮ್ಮೆ ದುಸ್ಸಾಹಸ ತೋರಿದರೆ ಉಗ್ರರ ಜೊತೆ ಪಾಕಿಸ್ತಾನವನ್ನು ಕೂಡ ಮಣ್ಣು ಮುಕ್ಕಿಸುತ್ತೇವೆ. ಭಾರತೀಯ ಸೇನೆ ಮಾತ್ರವಲ್ಲ, ಎಲ್ಲಾ ಭಾರತೀಯರು ಒಗ್ಗಟ್ಟಾಗಿ ಮುಗಿಬೀಳಲಿದ್ದಾರೆ ಎಂದರು.
ಭಾರತದ ಅತ್ಯಾಧುನಿಕ ಡ್ರೋಣ್ ಹಾಗೂ ಶಸ್ತ್ರಾಸ್ತ್ರಗಳು ಪಾಕಿಸ್ತಾನ ನಿದ್ದೆಗೆಡಿಸಿವೆ. ನಾವು ರಕ್ಷಣಾ ವ್ಯವಸ್ಥೆಯಲ್ಲಿ ಎಷ್ಟು ಮುಂದುವರಿದಿದ್ದೇವೆ ಎಂಬುದು ಪಾಕಿಸ್ತಾನಕ್ಕೆ ಅರಿವಾಗಿದೆ ಎಂದು ಮೋದಿ ನುಡಿದರು.
ಪಾಕಿಸ್ತಾನ ಕದನ ವಿರಾಮ ಘೋಷಣೆ ಬೆನ್ನಲ್ಲೇ ಪಂಜಾಬ್ ನ ಅಮೃತಸರದಲ್ಲಿರುವ ಅದಂಪುರ್ ವಾಯುನೆಲೆಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ಇಡೀ ದೇಶ ನಿಮಗೆ ಅಭಾರಿಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ವಾಯುನೆಲೆಗೆ ಭೇಟಿ ನೀಡಿದ ನಂತರ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಇಂದು ಬೆಳಿಗ್ಗೆ ಅದಂಪುರ ವಾಯುನೆಲೆಗೆ ಭೇಟಿ ನೀಡಿ ನಮ್ಮ ದೇಶದ ಧೈರ್ಯಶಾಲಿ ಯೋಧರನ್ನು ಭೇಟಿ ಮಾಡಿದೆ. ದೇಶದ ಶಸ್ತ್ರಾಸ್ತ್ರ ಪಡೆಯ ಸಾಧನೆಗೆ ಇಡೀ ದೇಶ ಅಭಾರಿಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.