ಐದು ಪಾಲಿಕೆಗಳ ನೂತನ ಕಚೇರಿಗೆ ಭೂಮಿಪೂಜೆಯನ್ನು ನವೆಂಬರ್ 1 ರಂದು ನೆರವೇರಿಸಲಾಗುವುದು. ಎಲ್ಲಾ ಪಾಲಿಕೆಗಳ ಗಡಿ ಭಾಗಗಳಲ್ಲಿ ಗಡಿ ಗೋಪುರಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಚೇರಿಯ ನಾಮಫಲಕ ಅನಾವರಣಗೊಳಿಸಿದ ನಂತರ ಶಿವಕುಮಾರ್ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಪ್ರತಿ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆಗಳ ಸುಧಾರಣೆ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ 500 ಮಂದಿ ಎಂಜಿನಿಯರ್ ಗಳಿಗೆ ಅನುಮೋದನೆ ನೀಡಲಾಗಿದೆ. ಈ ಹಿಂದೆ 198 ವಾರ್ಡ್ ಗಳಿದ್ದವು. ಈಗ 500 ವಾರ್ಡ್ ಗಳ ರಚನೆಯ ಅನುಮತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪಾಲಿಕೆಗಳ ಆಡಳಿತಾತ್ಮಕ ವೆಚ್ಚ, ಸಂಬಳ ಹಾಗೂ ನಿವೃತ್ತಿ ವೇತನಕ್ಕೆ ಎಂದು ಬಿಬಿಎಂಪಿಯಿಂದ ಸುಮಾರು 300 ಕೋಟಿ ರೂ. ಹಣ ಬಿಡುಗಡೆಗೆ ಮಾಡಲಾಗುವುದು ಎಂದರು.
ನಾಗರಿಕರು, ವಾಸ್ತುಶಿಲ್ಪಿಗಳು ಪಾಲಿಕೆ ಕಚೇರಿಗಳ ವಿನ್ಯಾಸ ಹೇಗಿರಬೇಕು ಎಂದು ಸಲಹೆ ನೀಡಬಹುದು. ಜೊತೆಗೆ ವಿನ್ಯಾಸಗಳನ್ನು ಸಹ ನೀಡಬಹುದು. ಇದರಲ್ಲಿ ಅತ್ಯುತ್ತಮ ಮೂರು ಅಥವಾ ಐದು ವಿನ್ಯಾಸಗಳನ್ನು ಆಯ್ಕೆ ಮಾಡಲಾಗುವುದು. ಇದಕ್ಕೆ 5 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ಹೇಳಿದರು.
ಪ್ರತಿ ಪಾಲಿಕೆಗಳಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳು, ಒಬ್ಬರು ಕೆಎಎಸ್, ಇಬ್ಬರು ಮುಖ್ಯ ಎಂಜಿನಿಯರ್ ಗಳು ಹಾಗೂ ಅಗತ್ಯ ಕಚೇರಿ ಸಿಬ್ಬಂದಿ ಕೆಲಸ ಮಾಡಲಿದ್ದಾರೆ. ಬೆಂಗಳೂರು ನಗರಕ್ಕೆ ಉತ್ತಮವಾದ ಆಡಳಿತ ಹಾಗೂ ಜನರ ಬಾಗಿಲಿಗೆ ಸರ್ಕಾರವನ್ನು ತೆಗೆದುಕೊಂಡು ಹೋಗಬೇಕು ಎಂದು ನಿರ್ಣಯಗಳನ್ನು ತೆಗೆದುಕೊಂಡು ಪಾಲಿಕೆಗಳು ಕೆಲಸ ಮಾಡಲಿವೆ. ಪಾಲಿಕೆಗಳ ವ್ಯಾಪ್ತಿಗೆ ಬರುವ ರಸ್ತೆ, ಚರಂಡಿ ಸೇರಿದಂತೆ ಇತರೇ ಸಂಗತಿಗಳನ್ನು ಗುರುತಿಸುವ ಕೆಲಸವಾಗಲಿದೆ ಎಂದು ಹೇಳಿದರು.
ಹೊಸ ಪ್ರದೇಶಗಳನ್ನು ಐದು ಪಾಲಿಕೆಗಳ ವ್ಯಾಪ್ತಿಗೆ ಸೇರಿಸಿಕೊಳ್ಳುವ ಬಗ್ಗೆ ಕೇಳಿದಾಗ, “ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವ ಸ್ಥಳೀಯ ಸಂಸ್ಥೆಗಳನ್ನು ಜಿಬಿಎ ವ್ಯಾಪ್ತಿಗೆ ಈಗಲೇ ಸೇರಿಸಿದರೆ ಪ್ರಸ್ತುತ ಪ್ರತಿನಿಧಿಗಳಾಗಿರುವವನ್ನೂ ಪಾಲಿಕೆ ಸದಸ್ಯರು ಎಂದು ಪರಿಗಣಿಸಬೇಕಾಗುತ್ತದೆ. ಮೊದಲು ಈಗ ರಚನೆಯಾಗಿರುವ ಪಾಲಿಕೆಗಳಿಗೆ ಚುನಾವಣೆ ನಡೆದ ನಂತರ ಇತರೇ ಪ್ರದೇಶಗಳ ವಿಲೀನದ ಬಗ್ಗೆ ಭವಿಷ್ಯದಲ್ಲಿ ಯೋಚಿಸಲಾಗವುದು ಎಂದರು.
ನೂತನ ಆಯುಕ್ತರುಗಳ ಜವಾಬ್ದಾರಿಗಳ ಬಗ್ಗೆ ಕೇಳಿದಾಗ, “ನೂತನ ಆಯುಕ್ತರುಗಳು ಜನರ ನಡುವೆಯಿದ್ದು ಕೆಲಸ ಮಾಡಬೇಕು. ಜಿಬಿಎ ಆಯುಕ್ತರು ಫುಟ್ ಪಾತ್, ನೀರು, ರಸ್ತೆ ಸೇರಿದಂತೆ ಇತರೇ ಕೆಲಸಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ದಿನಕ್ಕೆ 17- 18 ಗಂಟೆ ಕೆಲಸ ಮಾಡಬೇಕಾಗುತ್ತದೆ. ಆದ ಕಾರಣಕ್ಕೆ ಹಿರಿಯ ಅಧಿಕಾರಿಗಳ ಜೊತೆ ಯುವ ಅಧಿಕಾರಿಗಳನ್ನೂ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಮಹೇಶ್ವರ್ ರಾವ್ ಅವರು ಜಿಬಿಎಗೆ ಮುಖ್ಯ ಆಯುಕ್ತರಾಗಿ ಹಾಗೂ ಆಡಳಿತಾಧಿಕಾರಿಯಾಗಿ ಚುನಾವಣೆ ನಡೆಯುವವರೆಗೂ ಕಾರ್ಯನಿರ್ವಹಣೆ ಮಾಡಲಿದ್ದಾರೆ. ಪ್ರಾಧಿಕಾರದ ಸಮಿತಿಗೆ 75 ಸದಸ್ಯರನ್ನು ನೇಮಕ ಮಾಡಲಾಗಿದೆ ಎಂದರು.
ಗ್ರೇಟರ್ ಬೆಂಗಳೂರು ಎಂದು ಇಂಗ್ಲಿಷ್ ಹೆಸರಿಟ್ಟಿರುವ ಬಗ್ಗೆ ಶಾಸಕ ಅಶ್ವಥನಾರಾಯಣ ಅವರ ಆಕ್ಷೇಪದ ಬಗ್ಗೆ ಕೇಳಿದಾಗ, “ಅವರನ್ನೇ ಯಾವ ಹೆಸರು ಇಡಬೇಕು ಎಂದು ಸಲಹೆ ಕೇಳುತ್ತೇನೆ. ಮುಂಬೈ ಸೇರಿದಂತೆ ಬೇರೆ ಕಡೆಯು ಇದೇ ಪರಿಸ್ಥಿತಿ ಬಂದಿತ್ತು. ಮಾತೃಭಾಷೆಯನ್ನು ಕಡೆಗಣಿಸುವ ಮಾತಿಲ್ಲ. ಆದರೆ ಒಳ್ಳೆ ಪದ ಸಿಕ್ಕರೆ ಬದಲಾವಣೆ ಮಾಡೋಣ” ಎಂದು ಹೇಳಿದರು.
ಬೆಂಗಳೂರಿನ ಸಮಸ್ಯೆಗಳು ದಿನ ಬೆಳಗಾಗುವುದರಲ್ಲಿ ಬಗೆಹರಿಯುವುದಿಲ್ಲ. ಆದರೆ ಮುಂದಿನ ದಿನಗಳಲ್ಲಿ ನಾವು ಬಗೆಹರಿಸುವ ವಿಶ್ವಾಸವಿದೆ. ಕುಡಿಯುವ ನೀರು, ರಸ್ತೆ ಗುಂಡಿ, ಸಂಚಾರ ದಟ್ಟಣೆ ವಿಚಾರದಲ್ಲಿ ಉತ್ತಮವಾಗಿ ಕೆಲಸ ಮಾಡಲಾ ಗುವುದು. ಜಿಬಿಎಯಿಂದ ಬೆಂಗಳೂರು ಅಭಿವೃದ್ಧಿ ಸಾಧ್ಯವೇ ಎಂದು ಕೇಳಿದಾಗ, “ಖಂಡಿತವಾಗಿಯೂ ಸಾಧ್ಯವಾಗಲಿದೆ. ಸಾರ್ವಜನಿಕರು ಸಹ ಪಾಲಿಕೆಗಳ ಜೊತೆ ಕೈ ಜೋಡಿಸಬೇಕು. ಆಗ ಮಾತ್ರ ಪಾರದರ್ಶಕ ಆಡಳಿತ ನಡೆಸಲು ಸಾಧ್ಯವಾಗುತ್ತದೆ. ಜನರು ಪ್ರಾಮಾಣಿಕವಾಗಿ ತಮ್ಮ ಆಸ್ತಿಗಳನ್ನು ಘೋಷಣೆ ಮಾಡಿಕೊಳ್ಳಬೇಕು, ತೆರಿಗೆ ಪಾವತಿ ಮಾಡಬೇಕು ಎಂದರು.
ಜಿಬಿಎಯ ಕಾರ್ಯನಿರ್ವಹಣೆ ಏನೆಂದು ಕೇಳಿದಾಗ, “ಬಿಬಿಎ ಕೇವಲ ಉಸ್ತುವಾರಿ ನೋಡಿಕೊಳ್ಳುತ್ತದೆ. ಮಿಕ್ಕ ಎಲ್ಲಾ ಸಂಗತಿಗಳು ಪಾಲಿಕೆಗಳ ವ್ಯಾಪ್ತಿಗೆ ಬರಲಿದೆ ಎಂದು ತಿಳಿಸಿದರು.