ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳ 369 ವಾರ್ಡ್ಗಳಿಗೆ ರಾಜ್ಯ ಸರ್ಕಾರ ಮೀಸಲಾತಿ ನಿಗದಿಪಡಿಸಿ ಕರಡು ಅಧಿಸೂಚನೆ ಪ್ರಕಟಿಸಿದೆ. ಜನಸಂಖ್ಯೆ ಆಧಾರದಲ್ಲಿ ಮೇಲೆ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳು ಹಾಗೂ ಮಹಿಳೆಯರಿಗೆ ಶೇ.50 ಮೀಸಲಾತಿ ನೀಡಲಾಗಿದೆ.
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧತೆ ನಡೆಯುತ್ತಿರುವ ಹಿನ್ನಲೆಯಲ್ಲಿ ವಾರ್ಡ್ ಮೀಸಲಾತಿಯನ್ನು ಜನಸಂಖ್ಯೆಗೆ ಅನುಸಾರ ನಿಗದಿಪಡಿಸಲಾಗಿದೆ. ಡಿಸೆಂಬರ್ 19ರಂದು ರಾಜ್ಯ ಸರ್ಕಾರ ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ವಾರ್ಡ್ಗಳಿಗೆ ಮೀಸಲಾತಿ ನಿಗದಿಪಡಿಸುವ ಕುರಿತು ಮಾರ್ಗಸೂಚಿ ಹೊರಡಿಸಿ ಮೀಸಲಾತಿ ಪಟ್ಟಿ ಸಿದ್ಧಪಡಿಸುವಂತೆ ನಗರಾಭಿವೃದ್ಧಿ ಇಲಾಖೆಗೆ ಸೂಚನೆ ನೀಡಿತ್ತು. ಸೂಚನೆಯಂತೆ ಪ್ರತಿ ವಾರ್ಡ್ನ ಜನಸಂಖ್ಯೆ ಆಧಾರದಲ್ಲಿ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳು ಹಾಗೂ ಮಹಿಳಾ ಮೀಸಲಾತಿ ಒಳಗೊಂಡ ಕರಡು ಪಟ್ಟಿ ಸಿದ್ಧಗೊಂಡಿದೆ.
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನಲ್ಲಿ ಜ.12ರ ಸೋಮವಾರ ವಿಚಾರಣೆ ನಡೆಯಲಿದೆ. ವಾರ್ಡ್ಗಳಿಗೆ ನಿಗದಿಪಡಿಸಿರುವ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ಗೆ ಮಾಹಿತಿ ಸಲ್ಲಿಸುವ ಅಗತ್ಯವಿರುವುದರಿಂದ ರಾಜ್ಯ ಸರ್ಕಾರವು ಕರಡು ಅಧಿಸೂಚನೆ ಹೊರಡಿಸಿದೆ. ನಗರಾಭಿವೃದ್ಧಿ ಇಲಾಖೆ ವಾರ್ಡ್ ವಾರು ಕರಡು ಮೀಸಲಾತಿ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ.
ಪ್ರಕಟಿಸಿರುವ ಕರಡು ಪಟ್ಟಿಯಲ್ಲಿ ಒಟ್ಟು ವಾರ್ಡ್ಗಳ ಶೇ.50 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳು ಹಾಗೂ ಸಾಮಾನ್ಯ ವರ್ಗಗಳಲ್ಲಿಯೂ ಮಹಿಳೆಯರಿಗೆ ಪ್ರತ್ಯೇಕ ಮೀಸಲಾತಿ ಕಲ್ಪಿಸಲಾಗಿದೆ.
ರಾಜ್ಯ ಸರ್ಕಾರ ಪ್ರಕಟಿಸಿರುವ ಈ ಕರಡು ಮೀಸಲಾತಿ ಪಟ್ಟಿ ಮುಂದಿನ ದಿನಗಳಲ್ಲಿ ಸಾರ್ವಜನಿಕ ಆಕ್ಷೇಪಣೆ ಮತ್ತು ಸಲಹೆಗಳ ಪರಿಗಣಿಸಿದ ಬಳಿಕ ಅಂತಿಮವಾಗುವ ಸಾಧ್ಯತೆ ಇದೆ.


