ಬೆಂಗಳೂರು: ಮುಂಬರುವ ಜಿಬಿಎ ಚುನಾವಣೆಯಲ್ಲಿ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಎಲ್ಲಾ 11 ವಾರ್ಡ್ ಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಈಗಿನಿಂದಲೇ ಸಿದ್ಧತೆ ಆರಂಭವಾಗಿದೆ ಎಂದು ಕ್ಷೇತ್ರದ ಶಾಸಕರೂ ಆಗಿರುವ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.
ಹೆಬ್ಬಾಳದ ಕೆ.ಟಿ.ಟ್ರಾನ್ಸ್ ಪೋರ್ಟ್ ರಸ್ತೆ, ವಿ.ನಾಗೇನಹಳ್ಳಿಯ 3 ನೇ ಅಡ್ಡರಸ್ತೆಯ ಕನಕನಗರ, ಮನೋರಾಯನಪಾಳ್ಯದ ಲಕ್ಷ್ಮಿ ಗೋಲ್ಡ್ ಪ್ಯಾಲೇಸ್ ಬಳಿ, ದಿನ್ನೂರಿನ ಚಾಮುಂಡಿನಗರದ ಅಂಬೇಡ್ಕರ್ ಸರ್ಕಲ್, ಮಠದಹಳ್ಳಿಯ ಮುನೇಶ್ವರ ದೇವಸ್ಥಾನ ರಸ್ತೆಯ ಅರಳಿ ಮರ ಗುಂಡು ಪ್ರದೇಶದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ವಿದ್ಯುದ್ದೀಪ ಅಳವಡಿಕೆ ಕಾಮಗಾರಿಗಳಿಗೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.
ಹೆಬ್ಬಾಳ ಕ್ಷೇತ್ರದ ಉದ್ಯಾನವನಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ 30 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದು, ಹಲವು ಉದ್ಯಾನವನಗಳ ಕಾಮಗಾರಿ ಆರಂಭವಾಗಿದೆ. ಹಂತಹಂತವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸುವುದಾಗಿ ಅವರು ತಿಳಿಸಿದರು.
ರಾಜ್ಯದ ಎಲ್ಲಾ ಸಮುದಾಯಗಳ ಬೆಂಬಲ ಮತ್ತು ಆಶೀರ್ವಾದದಿಂದ ನಮ್ಮ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ನೆಚ್ಚಿನ ನಾಯಕರಾದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾರೆ. ನಮ್ಮ ಸರ್ಕಾರ ಸದೃಢವಾಗಿದ್ದು, ಎಲ್ಲಾ ಸಮುದಾಯಗಳ ಶ್ರೇಯಸ್ಸಿಗೆ ಒತ್ತು ನೀಡುತ್ತಿದೆ ಎಂದು ಹೇಳಿದರು.
ಜಿಬಿಎ ಅಡಿಯಲ್ಲಿ ಹೆಬ್ಬಾಳ ಕ್ಷೆತ್ರದಲ್ಲಿ 11 ವಾರ್ಡ್ ಗಳಾಗಿದ್ದು, ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಅರ್ಹ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಈ ಎಲ್ಲಾ ವಾರ್ಡ್ ಗಳಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ಈಗಿನಿಂದಲೇ ಶ್ರಮ ವಹಿಸಬೇಕೆಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ ಸಚಿವರು, ಕ್ಷೇತ್ರದಲ್ಲಿ ಯಾವುದೇ ಮೂಲ ಸೌಕರ್ಯ ಕೊರತೆ ಎದುರಾಗದಂತೆ ಮಾಡುವುದು ನನ್ನ ಜವಾಬ್ದಾರಿಯಾಗಿದೆ ಎಂದು ಭರವಸೆ ನೀಡಿದರು.
ಬಿಜೆಪಿ ಮುಖಂಡರು ಕಾಣೆ
ಪ್ರತಿಪಕ್ಷಗಳ ನಾಯಕರು ಚುನಾವಣೆ ಬಂದಾಗ ಮಾತ್ರ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ ಚುನಾವಣೆ ಮುಗಿದ ನಂತರ ಕ್ಷೇತ್ರದ ಕಡೆಗೆ ತಲೆಯನ್ನೇ ಹಾಕುವುದಿಲ್ಲ. ಇವರೆಲ್ಲಾ ಜಾತಿ ರಾಜಕಾರಣ ಮಾಡುವ ಮೂಲಕ ಸಮುದಾಯಗಳ ಮಧ್ಯೆ ವಿಷಬೀಜ ಬಿತ್ತುತ್ತಾ ಸಂಘರ್ಷ ಉಂಟು ಮಾಡುತ್ತಾರೆ. ಇಂತಹ ಜಾತಿ ರಾಜಕಾರಣ ಮಾಡುವ ಜನರನ್ನು ದೂರವಿಡಬೇಕು ಎಂದು ಕರೆ ನೀಡಿದರು.
ಹೆಬ್ಬಾಳ ಕ್ಷೇತ್ರದಲ್ಲಿ 10 ಸಾವಿರಕ್ಕೂ ಅಧಿಕ ಎಲ್ಇಡಿ ಲೈಟ್ ಗಳ ಅಳವಡಿಕೆಗೆ ಚಾಲನೆ ನೀಡಲಾಗಿದ್ದು, ಸದ್ಯದಲ್ಲಿಯೇ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಅದೇ ರೀತಿ, ಪ್ರತಿಯೊಬ್ಬ ನಾಗರಿಕರಿಗೂ ಶುದ್ಧ ಕುಡಿಯುವ ನೀರು ಪೂರೈಕೆಗೆ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.


