ಜಿಬಿಎ ಚುನಾವಣೆಯಲ್ಲಿ ಕಣಕ್ಕಿಳಿಯಲು ಬಯಸಿ 369 ವಾರ್ಡ್‌ಗಳಲ್ಲಿ 1,800 ಕಾಂಗ್ರೆಸ್ ಆಕಾಂಕ್ಷಿಗಳು ಅರ್ಜಿ ಸ್ವೀಕರಿಸಿದ್ದಾರೆ. ಜೂನ್ 30ರ ಒಳಗಡೆ ಜಿಬಿಎ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶ ಮಾಡಿದೆ. ಈಗಾಗಲೇ ಎಲ್ಲಾ ಪಕ್ಷಗಳು ಜಿಬಿಎ ಚುನಾವಣೆಗೆ ಸಿದ್ಧತೆ ಆರಂಭಿಸಿವೆ. ಕಾಂಗ್ರೆಸ್‌ನಲ್ಲಿ ಇದು ಮತ್ತಷ್ಟು ಬಿರುಸುಗೊಂಡಿದೆ.
ಆಕಾಂಕ್ಷಿಗಳಿಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ಪಟ್ಟಿ ಏರಿಕೆ ಆಗುತ್ತಿದೆ. 1,800 ಮಂದಿ ಅರ್ಜಿ ಸ್ವೀಕರಿಸಿದ್ದು, ಎಷ್ಟು ಮಂದಿ ಅರ್ಜಿ ಸಲ್ಲಿಕೆ ಮಾಡಲಿದ್ದಾರೆ ಎಂಬುದೇ ಕುತೂಹಲ. ಅರ್ಜಿ ಸಲ್ಲಿಕೆಗೆ ಇದೇ ತಿಂಗಳ 30ರವರೆಗೂ ಅವಕಾಶ ನೀಡಲಾಗಿದೆ. ಕೆಪಿಸಿಸಿ ಭಾರತ್ ಜೋಡೋ ಕಚೇರಿಯಲ್ಲಿ ಅರ್ಜಿ ನೀಡಲಾಗುತ್ತಿದೆ. ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗುವ ಸಾಧ್ಯತೆ ಇದೆ.
ಅರ್ಜಿ ಸಲ್ಲಿಕೆ ಮಾಡುವ ಪುರುಷ ಆಕಾಂಕ್ಷಿಗಳು 50 ಸಾವಿರ ರೂ., ಮಹಿಳಾ ಆಕಾಂಕ್ಷಿಗಳು 25 ಸಾವಿರ ರೂ. ಕಟ್ಟಬೇಕಾಗಿದೆ. ಅರ್ಜಿ ಸಲ್ಲಿಸಿದ ಬಳಿಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ವಾರ್ಡ್ ಮೀಸಲಾತಿ ಕರಡು ಪ್ರತಿ ಬಿಡುಗಡೆ ಆಗಿದೆ. ಅಧಿಕೃತ ಅಧಿಸೂಚನೆ ಬಂದ ಬಳಿಕ ಉಳಿದ ಪಕ್ಷಗಳ ಪ್ರತಿಕ್ರಿಯೆ, ತಯಾರಿ ಬಗ್ಗೆ ತಿಳಿಯಲಿದೆ.
ಗ್ರೇಟರ್ ಬೆಂಗಳೂರು ಅಥಾರಿಟಿ ವ್ಯಾಪ್ತಿಯೊಳಗಿನ ಐದು ನಗರ ಪಾಲಿಕೆಗಳಿಗೆ ಜೂನ್ 30ರೊಳಗೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಪೀಠ ರಾಜ್ಯ ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.
ಮಾರ್ಚ್ 16ರೊಳಗೆ ಮತದಾರರ ಪಟ್ಟಿ ಅಂತಿಮಗೊಳ್ಳಲಿದ್ದು, ಮಾರ್ಚ್‌ನಲ್ಲಿ ಎಸ್ಎಸ್ಎಲ್‌ಸಿ ಸೇರಿದಂತೆ ವಿವಿಧ ಪರೀಕ್ಷೆಗಳು ನಡೆಯಲಿವೆ. ಹೀಗಾಗಿ ಮೇ 26ರೊಳಗೆ ಚುನಾವಣಾ ದಿನಾಂಕ ಘೋಷಿಸಿ, ಜೂನ್ ತಿಂಗಳೊಳಗೆ ಚುನಾವಣೆ ಪ್ರಕ್ರಿಯೆ ಮುಗಿಸಲಾಗುವುದು ಎಂದು ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆಎನ್ ಫಣೀಂದ್ರ ಕೋರ್ಟ್‌ಗೆ ತಿಳಿಸಿದ್ದಾರೆ.


