Thursday, September 04, 2025
Menu

ಜಿಬಿಎ- ಬೆಳವಣಿಗೆಯ ಮಹಾಮೆಟ್ಟಿಲು, ಸಮತೋಲನ ಮತ್ತು ಪರಿಸರ ಸಾಮರಸ್ಯ ಕಾಪಾಡುವ ದೂರದೃಷ್ಟಿ ಅಗತ್ಯ

ಗ್ರೇಟರ್ ಬೆಂಗಳೂರಿನ ರಚನೆಯಿಂದ ದೇವನಹಳ್ಳಿಯ ದ್ರಾಕ್ಷಿ,ಸಪೋಟಾ, ರಾಮನಗರದ ರೇಷ್ಮೆ, ಚನ್ನಪಟ್ಟಣದ ಕರಕುಶಲಗೊಂಬೆ, ಮಾಗಡಿ, ನೆಲಮಂಗಲ ಹಾಗೂ ದೊಡ್ಡಬಳ್ಳಾಪುರದ ಹೂವು ಮತ್ತು ತರಕಾರಿಗಳಿಗೆ ಮತ್ತಷ್ಟು ಬೇಡಿಕೆ ಉಂಟಾಗುವುದು. ಒಟ್ಟಿನಲ್ಲಿ ರಾಜ್ಯ ಸರ್ಕಾರದ ಈ ಪ್ರಮುಖ ತೀರ್ಮಾನವು ಬೆಂಗಳೂರಿನ ಮತ್ತಷ್ಟು ಪ್ರಗತಿ ಹಾಗೂ ಕೀರ್ತಿಗೆ ಪ್ರಮುಖ ಮೆಟ್ಟಿಲು ಕೂಡಾ ಹೌದು.

ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಈಗ ರೆಕ್ಕೆ ಮೂಡಿದೆ. ಜಾಗತಿಕ ಮಟ್ಟದಲ್ಲಿ ಅತಿ ಶೀಘ್ರ ಬೆಳವಣಿಗೆಯ ನಾಗಾಲೋಟದಲ್ಲಿರುವ ಬೆಂಗಳೂರು ಈಗ ಮಹಾಬೆಂಗಳೂರು ನಗರ ಕೂಡಾ ಹೌದು. ಬೆಳವಣಿಗೆಯನ್ನು ತಡೆಯಲಾಗದು. ನಗರ ಬೆಳವಣಿಗೆ ಸಮತೋಲನ ಮತ್ತು ಪರಿಸರ ಸಾಮರಸ್ಯವನ್ನು ಕಾಪಾಡುವ ದೂರದೃಷ್ಟಿಯನ್ನು ಹೊಂದಿರಬೇಕು. ಅರವತ್ತರ ದಶಕದಲ್ಲಿ ಬೆಂUಳೂರು ಕೇವಲ ಒಂದು ನಗರಪಾಲಿಕೆ. ಎಪ್ಪತ್ತರ ದಶಕದಲ್ಲಿ ಇದು ಮಹಾನಗರಪಾಲಿಕೆ ಆಯಿತು. ತದನಂತರದ ದಿನಗಳಲ್ಲಿ ಬೃಹತ್ ಬೆಂಗಳೂರು ಮಹಾನಗರಪಾಲಿಕೆ (ಬಿಬಿಎಂಪಿ) ಆಗಿ ರೂಪುಗೊಂಡ ಮೇಲೆ ವಾರ್ಡುಗಳ ಸಂಖ್ಯೆ ಕೂಡಾ ಗಣನೀಯ ಪ್ರಮಾಣದಲ್ಲಿ ಹೆಚ್ಚಾಯಿತು.

ಬೆಂಗಳೂರಿನ ಸುತ್ತಮುತ್ತಲೂ ಸಾಕಷ್ಟು ಭೂಮಿ ಲಭ್ಯವಿದೆ. ಬೆಂಗಳೂರಿನ ಕೇಂದ್ರ ಭಾಗದಿಂದ ನಾಲ್ಕು ದಿಕ್ಕುಗಳ ಸುಮಾರು ೪೫ ಕಿಲೋಮೀಟರ್ ವ್ಯಾಪ್ತಿಯವರೆಗೂ ಭೂ ಪ್ರದೇಶವನ್ನು ಹೊಂದಿರುವ ಈ ನಗರಕ್ಕೆ ಇದೇ ವರದಾಯಕ. ಶೈಕ್ಷಣಿಕ ವಾಣಿಜ್ಯ ಮತ್ತು ಕೈಗಾರಿಕೆಗಳ ಸ್ಥಾಪನೆಗೆ ಹೇಳಿ ಮಾಡಿಸಿಟ್ಟದಂತಹ ಪ್ರದೇಶ. ಈ ಅನುಕೂಲ ದೇಶದ ಯಾವ ಮಹಾನಗರಕ್ಕೂ ಲಭ್ಯವಿಲ್ಲ. ಗ್ರೇಟರ್ ಬೆಂಗಳೂರಿನ ತೀರ್ಮಾನದ ಹಿಂದೆ ರಾಜಕೀಯ ಹಿತಾಸಕ್ತಿಗಳೇ ಜಾಸ್ತಿ ಇವೆ. ಇಂತಹ ಪ್ರಾಧಿಕಾರದ ರಚನೆ ಅಗತ್ಯವಿತ್ತೇ ಎಂಬುದು ಬಿಜೆಪಿ ಮತ್ತು ಜೆಡಿಎಸ್ ಕೆಲ ನಾಯಕರ ಆಕ್ಷೇಪ. ಆದರೆ ಬೆಳವಣಿಗೆಯ ದೃಷ್ಟಿಯಿಂದ ಇದನ್ನು ಗಮನಿಸಿದಾಗ ರಾಮನಗರ ನೆಲಮಂಗಲ, ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿಯ ಸಮಗ್ರ ಬೆಳವಣಿಗೆಗೆ ಇದು ಪೂರಕ.

ಹೊರ ಬೆಂಗಳೂರಿನ ಭಾಗದಲ್ಲಿಂದು ಎಲ್ಲ ಬಗೆಯ ಆರ್ಥಿಕ ಚಟುವಟಿಕೆಗಳು ಗರಿಗೆದರಿವೆ. ಪ್ರಪಂಚದ ಅ ಪ್ರತಿಷ್ಠಿತ ಐಟಿ ಮತ್ತು ಬಿಟಿ ಕಂಪನಿಗಳು ಸ್ಥಾಪನೆಯಾಗಿರುವುದೇ ಹೊರ ಬೆಂಗಳೂರಿನಲ್ಲಿ. ಗ್ರೇಟರ್ ಬೆಂಗಳೂರಿಗೆ ಇಂದು ಎರಡು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಅಗತ್ಯವಿದೆ ಎಂಬುದು ಗಮನಾರ್ಹ.

ಸುಗಮ ಆಡಳಿತ ನಿರ್ವಹಣೆಯ ದೃಷ್ಟಿಯಂದ ಇಂದು ಗ್ರೇಟರ್ ಬೆಂಗಳೂರು ಮತ್ತು ಮಹಾನಗರಪಾಲಿಕೆಗಳ ವಿಭಜನೆ ಅನಿವಾರ್ಯ. ಏಕೀಕೃತ ಬಿಬಿಎಂಪಿ ಆಡಳಿತದಿಂದ ಹಲವು ಹತ್ತು ಪ್ರಾತ್ಯಕ್ಷಿಕ ಸಮಸ್ಯೆಗಳು ಬೆಂಗಳೂರನ್ನು ಸುತ್ತುವರಿದಿದ್ದು ಇದನ್ನು ಸಮರ್ಥವಾಗಿ ನಿಭಾಯಿಸಲು ನಿತ್ಯವೂ ಬಿಬಿಎಂಪಿ ಅಧಿಕಾರಿಗಳು ಹರಸಾಹಸ ಮಾಡಿದ್ದನ್ನು ನಾವು ಇಲ್ಲಿಯವರೆಗೂ ನೋಡಿದ್ದಾಯಿತು. ಆದರೆ ಈಗ ಗ್ರೇಟರ್ ಬೆಂಗಳೂರಿನ ವ್ಯಾಪ್ತಿಯಲ್ಲಿ ಐದು ಪ್ರತ್ಯೇಕ ಮಹಾನಗರಪಾಲಿಕೆಗಳು ಅಸ್ತಿತ್ವಕ್ಕೆ ಬಂದಿರುವುದರಿಂದ ಇದರಿಂದ ಸಮರ್ಪಕ ಕುಡಿಯುವ ನೀರು ಪೂರೈಕೆ, ಸುಗಮ ವಾಹನ ಸಂಚಾರ ನಿರ್ವಹಣೆ ನೈರ್ಮಲ್ಯ ಸಂರಕ್ಷಣೆ ಮತ್ತು ಸೂಕ್ತ ಕಸ ನಿರ್ವಹಣೆ ಹಾಗೂ ಪರಿಣಾಮಕಾರಿ ಕರ ವಸೂಲಾತಿ ನಿರೀಕ್ಷಿಸಲಾಗಿದೆ.

ಗ್ರೇಟರ್ ಬೆಂಗಳೂರು ರಚನೆ ಆಗಿದ್ದರಿಂದ ಇಲ್ಲಿನ ಜಮೀನುಗಳ ಬೆಲೆ ಗಗನಕ್ಕೇರುವುದು ನಿಜ. ಆದರೆ ಇದರಿಂದ ಅರ್ಥಿಕ ಬೆಳವಣಿಗೆಗೆ ಭದ್ರ ಬುನಾದಿ ಹಾಕುವುದಮತೂ ಖಂಡಿತ. ಗ್ರೇಟರ್ ಬೆಂಗಳೂರಿನ ರಚನೆಯಿಂದ ದೇವನಹಳ್ಳಿಯ ದ್ರಾಕ್ಷಿ,ಸಪೋಟಾ, ರಾಮನಗರದ ರೇಷ್ಮೆ, ಚನ್ನಪಟ್ಟಣದ ಕರಕುಶಲಗೊಂಬೆ, ಮಾಗಡಿ ಮತ್ತು ನೆಲಮಂಗಲ ಮತ್ತು ದೊಡ್ಡಬಳ್ಳಾಪುರದ ಹೂವು ಮತ್ತು ತರಕಾರಿಗಳಿಗೆ ಮತ್ತಷ್ಟು ಬೇಡಿಕೆ ಉಂಟಾಗುವುದು ತಥ್ಯ. ಒಟ್ಟಿನಲ್ಲಿ ರಾಜ್ಯ ಸರ್ಕಾರದ ಈ ಮಹತ್ವಪೂರ್ಣ ತೀರ್ಮಾನದಿಂದ ಬೆಂಗಳೂರಿನ ಪ್ರಗತಿ ಮತ್ತು ಕೀರ್ತಿಗೆ ಬೃಹತ್ ಮೆಟ್ಟಿಲು ಆಗಲಿದೆ.

 

Related Posts

Leave a Reply

Your email address will not be published. Required fields are marked *