ಶಿವಮೊಗ್ಗ ದ ಹೊಸನಗರ ತಾಲೂಕಿನ ರಿಪ್ಪನ್ಪೇಟೆ ಸಮೀಪದ ಹರತಾಳು ಗ್ರಾಮದ ಶಶಿಧರ ಭಟ್ಟರ ತೋಟದಲ್ಲಿ ಅಪರೂಪದ ಗರುಡ ಶಿಲ್ಪ ಹೊಂದಿರುವ ಮಾಸ್ತಿಕಲ್ಲು ಪತ್ತೆಯಾಗಿದೆ. ವಿಜಯನಗರ ಕಾಲಘಟ್ಟಕ್ಕೆ ಸೇರಿದ ಈ ಶಾಸನವು ಇತಿಹಾಸ ಹಾಗೂ ಪುರಾತತ್ವದ ದೃಷ್ಟಿಯಿಂದ ಮಹತ್ವ ಪಡೆದಿದೆ.
ಈ ಮಾಸ್ತಿಕಲ್ಲು ಸುಮಾರು 32 ಇಂಚು ಉದ್ದ ಹಾಗೂ 15 1/2 ಇಂಚು ಅಗಲ ಹೊಂದಿದ್ದು, ಮೇಲ್ಭಾಗದಲ್ಲಿ ಪೂರ್ಣ ಕುಂಭ ಶಿಲ್ಪವಿದೆ. ಮೊದಲ ಪಟ್ಟಿಕೆಯಲ್ಲಿ ಗರುಡ ಶಿಲ್ಪ ಕೆತ್ತಲಾಗಿದ್ದು, ಎರಡನೇ ಪಟ್ಟಿಯಲ್ಲಿ ಒಬ್ಬ ಪುರುಷ ಮತ್ತು ಮೂವರು ಮಹಿಳೆಯರ ಚಿತ್ರ ಇದೆ.
ಒಂದು ಚಿತ್ರದಲ್ಲಿ ಎತ್ತಿದ ತೋಳು, ಕೈಪಟ್ಟಿ, ಎರಡು ಬಳೆ ಹಾಗೂ ಬೆರಳ ಮಧ್ಯೆ ನಿಂಬೆಹಣ್ಣು ಹಿಡಿದಿರುವ ಶಿಲ್ಪ ಕಾಣಸಿಗುತ್ತದೆ. ಇದಕ್ಕೆ ಕೆಳಭಾಗದಲ್ಲಿ 7 ಸಾಲಿನ ಶಾಸನವಿದ್ದು, ಅಂತಿಮ ಪಟ್ಟಿಕೆಯಲ್ಲಿ ಪಲ್ಲಕ್ಕಿಯೊಂದಿಗೆ ಸಾಗುತ್ತಿರುವ ಇಬ್ಬರು ಪುರುಷರ ಶಿಲ್ಪವಿದೆ.
ಶಾಸನದ ವಿವರದಂತೆ, ಬೊಮ್ಮದೇವಗೌಡ ಎಂಬವರು ಮರಣ ಹೊಂದಿದ ನಂತರ, ಅವರ ಪತ್ನಿಯರಾದ ಗುರಾಕಾಯಿ, ಬೊಮ್ಮಾಯಿ ಮತ್ತು ಲಿಂಗಾಯಿ ಸಹಗಮನ (ಸತಿ) ಮಾಡಿ ಮೃತರಾದ ಬಗ್ಗೆ ಉಲ್ಲೇಖಿಸಲಾಗಿದೆ. ಈ ಶಾಸನದ ಸಂಶೋಧನೆ ಯನ್ನು ಆದಿತ್ಯ ನಂಜವಳ್ಳಿ ಹಾಗೂ ಗಣೇಶ್ ಕೆ.ಎನ್. ನಡೆಸಿದ್ದಾರೆ.
ರಾಜ್ಯ ಪುರಾತತ್ವ ಇಲಾಖೆ ನಿರ್ದೇಶಕರಾದ ಡಾ. ಶೆಜೇಶ್ವರ ಅವರು, ಮಾಸ್ತಿಕಲ್ಲಿನಲ್ಲಿರುವ ಗರುಡ ಶಿಲ್ಪವು ವೈಷ್ಣವ ಧರ್ಮಕ್ಕೆ ಸೇರಿದ ವ್ಯಕ್ತಿಯ ಮರಣವನ್ನು ಸೂಚಿಸುತ್ತದೆ ಎಂದು ತಿಳಿಸಿದ್ದು, ಇದು ಅತ್ಯಂತ ಅಪರೂಪದ ಮಾಸ್ತಿಕಲ್ಲು ಎಂಬುದಾಗಿ ಅಭಿಪ್ರಾಯಪಟ್ಟಿದ್ದಾರೆ.


