Menu

ಬಸ್ ಗಳಲ್ಲಿ ಮೊಬೈಲ್ ದೋಚುತ್ತಿದ್ದ 6 ಮಂದಿ ಗ್ಯಾಂಗ್ ಪತ್ತೆ

ಬೆಂಗಳೂರು:ಬಸ್ ಗಳಲ್ಲಿ ಒತ್ತಡ ಉಂಟುಮಾಡಿ ಪ್ರಯಾಣಿಕರ ಮೊಬೈಲ್ ಗಳನ್ನು ದೋಚುತ್ತಿದ್ದ ಗ್ಯಾಂಗ್ ನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿ 25 ಲಕ್ಷ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಿದ್ದಾರೆ.

ಗ್ಯಾಂಗ್ ನಲ್ಲಿದ್ದ ಆಂಧ್ರಪ್ರದೇಶದ ಕಡಪ ಜಿಲ್ಲೆಯ ನಾಗನೂರಿ ಕುಮಾರ್ (22)ಬೆಳಗಾವಿ ಜಿಲ್ಲೆಯ ಘಟಪ್ರಭಾದ ಸಾಗರ್ ಸಣ್ಣಕ್ಕಿ(32), ಶಿವಕುಮಾರ್ (30) ಗುಡ್ಡು ಸಾಬ್ ಮುಲ್ಲಾ ಅಲಿಯಾಸ್ ಗುಡ್ಡು (36) ಮೂಡಲಗಿಯ ಹಾಲಪ್ಪ(29) ಆಂಧ್ರಪ್ರದೇಶದ ನಂದ್ಯಾಲ್ ನ ಶಿವಶಂಕರ್(20) ಗ್ಯಾಂಗ್ ನ ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತ ಆರೋಪಿಗಳಿಂದ 25 ಲಕ್ಷ ಮೌಲ್ಯದ 70 ಮೊಬೈಲ್ ಗಳು 1 ಕಾರು, ಆಟೋ ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಪ್ರಗತಿನಗರದ ವ್ಯಕ್ತಿಯೊಬ್ಬರು ಕೊಡ್ಲುಗೇಟ್‌ನ ಸ್ನೇಹಿತನ ಮನೆಗೆ ಹೋಗುವ ಎಲೆಕ್ಟ್ರಾನಿಕ್ ಸಿಟಿ ಬಿಎಂಟಿಸಿ ಬಸ್ ನಿಲ್ದಾಣದಿಂದ ಬಸ್ ಹತ್ತುವ ಸಮಯದಲ್ಲಿ ತಳ್ಳಾಡಿಕೊಂಡು ಜೇಬಿನಲ್ಲಿದ್ದ ಮೊಬೈಲ್ ದೋಚಿ ಪರಾರಿಯಾಗಿದ್ದ ಸಂಬಂಧ ದೂರು ನೀಡಿದ್ದರು.

ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಇನ್ಸ್‌ಪೆಕ್ಟರ್ ನವೀನ್ ಜಿ.ಎಮ್ ಮತ್ತವರ ಸಿಬ್ಬಂದಿ ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ಖಚಿತ ಮಾಹಿತಿಯನ್ನು ಕಲೆ ಹಾಕಿ ಹೊಸೂರು ಮುಖ್ಯ ರಸ್ತೆಯ ಬಿಎಂಟಿ.ಸಿ ಬಸ್ ನಿಲ್ದಾಣದ ಬಳಿ ಮೂವರನ್ನು ಬಂಧಿಸಿ ವಿಚಾರಣೆ ನಡೆಸಿ 21 ಮೊಬೈಲ್ ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಎರಿಟಿಗಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಮೂವರು ಆರೋಪಿಗಳನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿ, ಈ ಪ್ರಕರಣದಲ್ಲಿ ಇನ್ನೂ ನಾಲ್ವರು ಸಹಚರರು ಭಾಗಿಯಾಗಿರುವುದಾಗಿ ತಿಳಿಸಿ. ಅವರುಗಳ ಬಗ್ಗೆ ಮಾಹಿತಿಯನ್ನು ನೀಡಿರುತ್ತಾರೆ.

ಅದರಂತೆ ದೇವನಹಳ್ಳಿಯ ದೇವಗಾನಹಳ್ಳಿ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಕಾರ್ಯಾಚರಣೆ ಕೈಗೊಂಡು ಮತ್ತೆ ಮೂವರನ್ನು ಬಂಧಿಸಿ ಅವರಿಂದ 49 ಮೊಬೈಲ್ ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಆಟೋರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳ ಬಂಧನದಿಂದ, ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯ 1 ಮೊಬೈಲ್ ಫೋನ್ ಕಳವು ಪ್ರಕರಣ ಪತ್ತೆಯಾಗಿದ್ದು, ಉಳಿದ 69 ಮೊಬೈಲ್ ಫೋನ್, । ಕಾರ್, 1 ಆಟೋ ರಿಕ್ಷಾದ ಮಾಲೀಕರುಗಳು ಪತ್ತೆಯಾಗಬೇಕಾಗಿದ್ದು ಹಾಗೂ ಈ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಮತ್ತೋರ್ವನ ಬಂಧನಕ್ಕೆ ಶೋಧ ಕೈಗೊಳ್ಳಲಾಗಿದೆ.

ಕುಖ್ಯಾತ ಬೈಕ್ ಕಳ್ಳ ಸೆರೆ:

ನಕಲಿ‌ ಕೀ ಬಳಸಿ ಇಲ್ಲವೇ ಹ್ಯಾಂಡಲ್ ಲಾಕ್ ಮುರಿದು ದ್ವಿ-ಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಹೊರ ರಾಜ್ಯದ ಕಳ್ಳನನ್ನು ಬಂಧಿಸಿರುವ ಕೆ.ಆರ್ ಪುರ ಪೊಲೀಸರು 31ಲಕ್ಷ ಮೌಲ್ಯದ ವಾಹನಗಳನ್ನು ಜಪ್ತಿ ಮಾಡಿದ್ದಾರೆ.

ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಮದನಪಲ್ಲಿಯ ಹೇಮಂತ್ (23) ಬಂಧಿತ ಆರೋಪಿಯಾಗಿದ್ದು, ಆತನಿಂದ 31 ಲಕ್ಷ ಮೌಲ್ಯದ 31ವಿವಿಧ ಕಂಪನಿಯ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ವೈಟ್ ಫೀಲ್ಡ್ ಡಿಸಿಪಿ ಪರಶುರಾಮ್ ತಿಳಿಸಿದ್ದಾರೆ.

ಕೆಆರ್ ಪುರಂನ‌ ಚಿಕ್ಕಬಸವನಪುರದಲ್ಲಿ ಮನೆಯ ಮುಂಭಾಗ ಬೀಗ ಹಾಕಿ ನಿಲ್ಲಿಸಿದ್ದ ದ್ವಿಚಕ್ರವಾಹನವನ್ನು ಕಳವು ಮಾಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿರುವ ಕೆ ಆರ್ ಪುರಂ ಪೊಲೀಸ್ ಇನ್ಸ್‌ಪೆಕ್ಟರ್ ರಾಮಮೂರ್ತಿ.ಬಿ ಮತ್ತವರ ಸಿಬ್ಬಂದಿ ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ಖಚಿತ ಮಾಹಿತಿಯನ್ನು ಕಲೆ ಹಾಕಿ ಪರಪ್ಪನ ಅಗ್ರಹಾರದ ಹೊಸೂರು ರಸ್ತೆಯಲ್ಲಿ ಕಳವು ಮಾಡಿದ ಬೈಕ್ ಸಮೇತ ಆರೋಪಿಯನ್ನು ಬಂಧಿಸಲಾಗಿದೆ ಎಂದು ಹೇಳಿದರು.

ಆಂಧ್ರದಲ್ಲಿ ಮಾರಾಟ:

ಆರೋಪಿಯನ್ನು ಸುಧೀರ್ಘ ವಿಚಾರಣೆ ನಡೆಸಿದಾಗ ಕಳವು ಮಾಡಿದ ದ್ವಿ-ಚಕ್ರ ವಾಹನಗಳನ್ನು ಆಂದ್ರಪ್ರದೇಶದ ತಿರುಪತಿಯಲ್ಲಿ ವಾಸವಿರುವ ಓರ್ವ ವ್ಯಕ್ತಿ ಹಾಗೂ ಮದನಪಲ್ಲಿಯಲ್ಲಿ ವಾಸವಿರುವ ಇಬ್ಬರು ವ್ಯಕ್ತಿಗಳಿಗೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದು,
ಅದರಂತೆ ತಿರುಪತಿ, ಮದನಪಲ್ಲಿಗೆ ತೆರಳಿ 30 ದ್ವಿ-ಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಆರೋಪಿ ಬಂಧನದಿಂದ ಕೆ.ಆರ್ ಪುರಂ 6 ಆವಲಹಳ್ಳಿ, ಕಾಡುಗೋಡಿ, ಚಿಕ್ಕಬಳ್ಳಾಪುರದ ತಲಾ ಒಂದು ಸೇರಿ 9 ದ್ವಿ-ಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿರುತ್ತವೆ. ಉಳಿದ 22 ದ್ವಿ-ಚಕ್ರ ವಾಹನಗಳ ಮಾಲೀಕರ ಪತ್ತೆ ಕಾರ್ಯ ಮುಂದುವರೆದಿದೆ ಎಂದರು.

Related Posts

Leave a Reply

Your email address will not be published. Required fields are marked *