ಬೆಂಗಳೂರಿನಲ್ಲಿ ಮೊಬೈಲ್ ಸ್ನಾಚಿಂಗ್ ಮಾಡಲೆಂದೇ ಆಂಧ್ರಪ್ರದೇಶದಿಂದ ಹುಡುಗರ ಕರೆ ತಂದು ಕಳ್ಳತನ ಮಾಡಿಸುತ್ತಿದ್ದ ಪ್ರಕರಣ ಬೇಧಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ನಾಗನೂರಿ ಕುಮಾರ್, ಸಾಗರ್, ಶಿವಕುಮಾರ್, ಶಿವಶಂಕರ್, ಗುಡ್ಡಸಾಬ್ ಹಾಗೂ ಹಾಲಪ್ಪ ಬಂಧಿತ ಆರೋಪಿಗಳು.
ದುಡ್ಡಿನ ಅವಶ್ಯಕತೆ ಇರುವ ಕುಟುಂಬಗಳಿಗೆ ಹಣ ಸಹಾಯ ಮಾಡಿ ಸಣ್ಣ ಹುಡುಗರನ್ನು ಆರೋಪಿ ರಘು ಮೊಬೈಲ್ ಕದಿಯಲು ಬೆಂಗಳೂರಿಗೆ ಕರೆ ತರುತ್ತಿದ್ದ. ಮೊಬೈಲ್ ಕಳ್ಳತನ ಮಾಡಿ ಸಿಕ್ಕಿಬಿದ್ರೆ ಅವರನ್ನು ಸೇವ್ ಮಾಡುವುದಕ್ಕೂ ಗ್ಯಾಂಗ್ ರಚಿಸಿಕೊಂಡಿದ್ದ. ಕದ್ದ ಮಾಲನ್ನು ಸಾಗಿಸುವುದಕ್ಕೂ ಒಂದು ಗ್ಯಾಂಗ್ ಮಾಡಿಕೊಂಡಿದ್ದಾನೆ.
ಹೀಗೆ ಮೂರು ಗುಂಪುಗಳ ಕಾರ್ಯಾಚರಣೆಯೊಂದಿಗೆ ಮೊಬೈಲ್ ಕಳ್ಳತನ ಮಾಡಲಾಗುತ್ತಿತ್ತು. ಬೆಂಗಳೂರಿನ ಬಿಎಂಟಿಸಿ ಬಸ್ ಪ್ರಯಾಣಿಕರೇ ಮುಖ್ಯ ಗುರಿಯಾಗಿದ್ದರು. ಮೊದಲುಎರಡು ಗ್ರೂಪ್ ಬಸ್ಸು ಹತ್ತಿದರೆ ಒಂದು ಗ್ರೂಪ್ ಮೊಬೈಲ್ ಕಳ್ಳತನ ಮಾಡಿ ಮುಂದಿನ ಸ್ಟಾಪ್ ನಲ್ಲಿ ಮತ್ತೊಂದು ಗ್ಯಾಂಗ್ ಗೆ ತಲುಪಿಸುತ್ತಿದ್ದರು. ಒಂದು ವೇಳೆ ಕಳ್ಳತನ ಮಾಡಿ ಸಿಕ್ಕಿಬಿದ್ದರೆ ಮತ್ತೊಂದು ಗ್ಯಾಂಗ್ ಅವರನ್ನು ಹೊಡೆದು ಪೊಲೀಸ್ ಠಾಣೆಗೆ ಕೊಡೊ ನೆಪದಲ್ಲಿ ಬಂದು ನಾಟಕ ಮಾಡುತ್ತಿದ್ದರು.
ಈ ಗ್ಯಾಂಗ್ ಪ್ರತಿ ದಿನ ಬೇರೆ ಬೇರೆ ಏರಿಯಾಗಳಲ್ಲಿ ಮೊಬೈಲ್ ಕಳ್ಳತನ ಮಾಡುತ್ತಿತ್ತು. ಎಲ್ಲವನ್ನೂ ಕಿಂಗ್ ಪಿನ್ ರಘು ಮಾನಿಟರ್ ಮಾಡುತ್ತಿದ್ದ. ಆತ ಪರಾರಿಯಾಗಿದ್ದು, ಆತನ ಗ್ಯಾಂಗ್ ನ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳಿಂದ ನೂರಕ್ಕೂ ಅಧಿಕ ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ.