ರಾಯಚೂರು ತಾಲೂಕಿನ ಗಟ್ಟುಬಿಚ್ಚಾಲಿ ಗ್ರಾಮದಲ್ಲಿ ಗಣೇಶನ ಮೆರವಣಿಗೆ ವೇಳೆ ವಿದ್ಯುತ್ ಸ್ಪರ್ಶಿಸಿ ಯುವಕ ಮೃತಪಟ್ಟಿದ್ದಾನೆ. ನರಸಿಂಹ (22) ಮೃತ ಯುವಕ.
ಹನುಮಾಪುರ ಬಳಿ ರಾಜೊಳ್ಳಿಬಂಡಾ ಕಾಲುವೆಯಲ್ಲಿ ಗಣೇಶ ವಿಸರ್ಜನೆಗೆ ಹೊರಟಿದ್ದ ವೇಳೆ ಬೊಲೆರೋ ಪಿಕಪ್ ಮೇಲೆ ಗಣೇಶ ಮೂರ್ತಿ ಹಿಡಿದು ಕುಳಿತಿದ್ದ ಯುವಕನಿಗೆ ವಿದ್ಯುತ್ ಸ್ಪರ್ಶಿಸಿದೆ. ಬೊಲೆರೋ ಪಿಕಪ್‌ನಲ್ಲಿದ್ದ ಇನ್ನುಳಿದ ಯುವಕರು ವಿದ್ಯುತ್ ಸ್ಪರ್ಶಿಸಿದ ಕೂಡಲೇ ಕೆಳಗೆ ಬಿದ್ದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಳೆಯ ನಡುವೆಯೇ ಗಣೇಶನ ಮೆರವಣಿಗೆ ನಡೆಯುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಗರ ತಾಲೂಕಿನ ಡಿಗಟೆಕೊಪ್ಪ ಗ್ರಾಮದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಜನರೇಟರ್ ಸ್ಫೋಟಗೊಂಡು ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಯುವಕ ಲೋಕೇಶ್‌ಗೆ ಸಾಗರದ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಸ್ತಿಕಂಬ ಗಣೇಶೋತ್ಸವ ಸಮಿತಿಯ ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಈ ದುರಂತ ನಡೆದಿದೆ.
ವಿಜಯನಗರದ ಹೊಸಪೇಟೆಯಲ್ಲಿ ಗಣೇಶ ಮೆರವಣಿಗೆ ಯುವಕ ಪಟಾಕಿ ಬಾಕ್ಸ್ ತಲೆಯ ಮೇಲೆ ಹೊತ್ತು ಸಿಡಿಸಿದ್ದರಿಂದ ಆತಂಕದ ವಾತಾವರಣ ನಿರ್ಮಾಣವಾಗಿತ್ತು, ಜನ ಪಟಾಕಿ ಬಾಕ್ಸ್ ಕಸಿಯಲು ಮುಂದಾದರೂ ಯುವಕ ತನ್ನ ಹುಚ್ಚಾಟ ಮುಂದುವರೆಸಿದ್ದ. ಪೊಲೀಸರು ತಲೆಯ ಮೇಲೆ ಇದ್ದ ಪಟಾಕಿ ಬಾಕ್ಸ್ ಕಸಿದು ಯುವಕನನ್ನು ಗದರಿಸಿ ಕಳಿಸಿದ್ದಾರೆ.