Menu

ವೀರನಹೊಸಹಳ್ಳಿಯಿಂದ ಅರಮನೆಯತ್ತ ಹೊರಟ ಗಜಪಡೆ ಪಯಣಕ್ಕೆ ಚಾಲನೆ!

gajapade

ವೀರನಹೊಸಹಳ್ಳಿ: ನಾಡಹಬ್ಬ ದಸರೆಗೆ ಐತಿಹಾಸಿಕ ಮುನ್ನುಡಿ ಎಂಬಂತೆ ಗಜಪಡೆಗೆ ಗಣ್ಯರ ಪುಷ್ಪಾರ್ಚನೆಯೊಂದಿಗೆ ಮೈಸೂರು ಜಿಲ್ಲೆಯ ವೀರನಹೊಸಹಳ್ಳಿಯಲ್ಲಿ ಜನಸಾಗರದ ನಡುವೆ ಸೋಮವಾರ ಅದ್ಧೂರಿ ಚಾಲನೆ ನೀಡಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವರ ಗೈರಿನಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ, ಪಶು ಸಂಗೋಪನೆ ಇಲಾಖೆ ಸಚಿವ ಕೆ.ವೆಂಕಟೇಶ್ ನೇತೃತ್ವದಲ್ಲಿ ಚಾಲನೆ ನೀಡಲಾಯಿತು.

ಮೊದಲ ತಂಡದಲ್ಲಿ ಅಭಿಮನ್ಯು ಸಾರಥ್ಯದಲ್ಲಿ ಧನಂಜಯ, ಭೀಮ, ಕಂಜನ್, ಏಕಲವ್ಯ, ಪ್ರಶಾಂತ, ಮಹೇಂದ್ರ, ಕಾವೇರಿ, ಬಳ್ಳೆ‌ಲಕ್ಷ್ಮಿ ಆನೆಗಳಿಗೆ ಪುರೋಹಿತರು ಪೂಜೆ ಸಲ್ಲಿಸಿದರು.

ದಸರಾ ಆಚರಣೆಯ ಮೊದಲ ಕಾರ್ಯಕ್ರಮ ಇದಾಗಿದ್ದು, ಇಂದಿನಿಂದ ದಸರಾ ಮಹೋತ್ಸವದ ಸಿದ್ಧತೆಗಳು ಆರಂಭಗೊಂಡಂತಾಗಿದೆ. ಇದೇ ಮೊದಲ ಬಾರಿಗೆ ಬಾರಿ ಸಂಖ್ಯೆಯಲ್ಲಿ ಸಾರ್ವಜನಿಕರು ಕಿಕ್ಕಿರಿದು ಸೇರಿದ್ದು ಜಾತ್ರಾ ಮಹೋತ್ಸವದ ವಾತಾವರಣ ಸೃಷ್ಟಿಯಾಗಿತ್ತು.

ದಸರಾ ಗಜಯಪಣ ಆರಂಭ ಹಿನ್ನಲೆಯಲ್ಲಿ ವೀರನಹೊಸಹಳ್ಳಿ ಗ್ರಾಮ ತಳಿರು ತೋರಣಗಳಿಂದ ಸಿಂಗಾರಗೊಂಡಿತ್ತು. ಮಾವುತರು ಮತ್ತು ಕಾವಾಡಿ ಮಕ್ಕಳು ಮತ್ತು ಕುಟುಂಬದವರು ಗಜಯಪಯಣದೊಂದಿಗೆ ಮೈಸೂರಿನತ್ತ ಪ್ರಯಾಣ ಬೆಳೆಸಲು ಎಲ್ಲಾ ಸಾಮಾಗ್ರಿಗಳನ್ನು ಹೊತ್ತು ತಂದು ಸಿದ್ಧರಾಗಿದ್ದರು.

ಗಜಪಯಣದ ಬೀಳ್ಕೊಡಲು ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸಿದವು. ವೀರಗಾಸೆ, ಕಂಸಾಳೆ, ಪಟದ ಕುಣಿತ, ಪೂಜಾ ಕುಣಿತ, ಡೊಳ್ಳು ಕುಣಿತ ನಗಾರಿಯೊಂದಿಗೆ ಹಾಡಿಮಕ್ಕಳ ಅರಣ್ಯ ಕುಣಿತ ಕಣ್ಮನ ಸೆಳೆಯಿತು.

ಅರ್ಜುನ‌ ಪ್ರಶಸ್ತಿ ಪ್ರದಾನ:

ಹಾಸನ ಜಿಲ್ಲೆಯಲ್ಲಿ ಕಾಡಾನೆ ಸೆರೆ ವೇಳೆ ಮೃತಪಟ್ಟ ಅಂಬಾರಿ ಹೊತ್ತಿದ್ದ ಆನೆ ಅರ್ಜುನ ಹೆಸರಿನ ಪ್ರಶಸ್ತಿಯನ್ನು ಇದೇ ಮೊದಲ ಬಾರಿಗೆ ಪ್ರದಾನ ಮಾಡಲಾಯಿತು. ಮೊದಲ ಸಾಲಿನ ಪ್ರಶಸ್ತಿಗೆ ಭೀಮ ಆನೆಯ ಮಾವುತ ಗುಂಡಣ್ಣ ಹಾಗೂ ಕಾವಾಡಿ ನಂಜುಡಸ್ವಾಮಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಜಿ.ಡಿ.ಹರೀಶ್ ಗೌಡ ವಹಿಸಿದ್ದರು. ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್, ಶಾಸಕರಾದ ಡಿ.ರವಿಶಂಕರ್, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ , ಜಿ.ಪಂ.ಸಿಇಓ ಯುಕೇಶ್ ಕುಮಾರ್, ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಎಸ್ಪಿ ವಿಷ್ಣುವರ್ಧನ್, ಹುಣಸೂರು ಉಪ ವಿಭಾಗಾಧಿಕಾರಿ ವಿಜಯಕುಮಾರ್, ತಹಶೀಲ್ದಾರ್ ಮಂಜುನಾಥ್, ಡಿಸಿಎಫ್ ಪ್ರಭುಗೌಡ, ಮಾಲತಿ ಪ್ರಿಯಾ, ಕೆಪಿಸಿಸಿ ವಕ್ತಾರಂ ಎಂ.ಲಕ್ಷ್ಮಣ್, ಸಂಯೋಜಕ ಎನ್.ಭಾಸ್ಕರ್, ವಕೀಲ ಕಾಂತರಾಜು ಸೇರಿ ಹಲವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published. Required fields are marked *