ಗದಗ ತಾಲೂಕಿನ ಹರ್ಲಾಪುರ ಬಳಿ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಕಾರು ಮತ್ತು ಬಸ್ ಮಧ್ಯೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಕಾನ್ಸ್ಟೇಬಲ್ಗಳು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.
ಕಾರಿನಲ್ಲಿದ್ದ ಪೊಲೀಸ್ ಕಾನ್ಸ್ಟೇಬಲ್ಗಳಾದ ಅರ್ಜುನ್ ನೆಲ್ಲೂರ(29) ಮತ್ತು ವೀರೇಶ್ ಉಪ್ಪಾರ(31) ಹಾಗೂ ಅರ್ಜುನ್ ಚಿಕ್ಕಪ್ಪ ರವಿ ನೆಲ್ಲೂರ(43) ಮೃತಪಟ್ಟವರು.
ಅರ್ಜುನ್ ನೆಲ್ಲೂರ, ವೀರೇಶ್ ಉಪ್ಪಾರ ಮತ್ತು ರವಿ ನೆಲ್ಲೂರ ಕಾರಿನಲ್ಲಿ ತೆರಳುತ್ತಿದ್ದಾಗ ವೇಗದಲ್ಲಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿಯಾಗಿ ಬಳಿಕ ಬಸ್ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಅಸು ನೀಗಿದ್ದು, ಅಪಘಾತದ ತೀವ್ರತೆಗೆ ಕಾರು ಜಖಂಗೊಂಡಿದೆ.
ಕಾರು ವೇಗವಾಗಿ ಬರುತ್ತಿತ್ತು, ಏಕಾಏಕಿ ಡಿವೈಡರ್ಗೆ ಡಿಕ್ಕಿ ಹೊಡೆದು ಜಂಪ್ ಆಗಿ ಬಸ್ಗೆ ಡಿಕ್ಕಿ ಹೊಡೆಯಿತು. ಕಾರ್ನಲ್ಲಿ ಇದ್ದ ಮೂವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದರು ಎಂದು ಗೋವಾ ಬಸ್ ಚಾಲಕ ದಿಲೀಪ್ ಹಾಗೂ ನಿರ್ವಾಹಕ ಹೀರೇಶ ಹೇಳಿದ್ದಾರೆ.
ಈ ದುರಂತದಲ್ಲಿ ಮೃತಪಟ್ಟ ವೀರೇಶ್ ಉಪ್ಪಾರ ಕೊಪ್ಪಳ ಜಿಲ್ಲಾ ಪೊಲೀಸ್ ವೈರ್ಲೆಸ್ ವಿಭಾಗದಲ್ಲಿ ಹಾಗೂ ಅರ್ಜುನ್ ನೆಲ್ಲೂರ ಹಾವೇರಿ ಜಿಲ್ಲಾ ಪೊಲೀಸ್ ವೈರ್ಲೆಸ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.