Menu

ಯುದ್ಧ ವಿಚಾರದಲ್ಲಿ ಕ್ಷಣಕ್ಕೊಂದು ಮಾತು ಬೇಡ: ಟ್ರಂಪ್‌ಗೆ ಫ್ರೆಂಚ್‌ ಅಧ್ಯಕ್ಷ ಮ್ಯಾಕ್ರನ್ ವಾರ್ನ್‌

ಮಧ್ಯಪ್ರಾಚ್ಯ ಸಂಘರ್ಷ ವಿಚಾರದಲ್ಲಿ ಕ್ಷಣಕ್ಕೊಂದು ಮಾತು ಆಡುವ ಮೂಲಕ ಗೊಂದಲ ಸೃಷ್ಟಿಸಬೇಡಿ. ನೀವು ಗಂಭೀರವಾಗಿರಿ, ದಿನಕ್ಕೊಂದು ಕ್ಷಣಕ್ಕೊಂದು ಮಾತನಾಡಬೇಡಿ. ಒಂದು ದಿನ ಒಂದು ಮಾತು, ಮತ್ತೊಂದು ದಿನ ಇನ್ನೊಂದು ಮಾತು ಹೇಳಬೇಡಿ. ನಿತ್ಯವೂ ಇಂತಹ ಹೇಳಿಕೆಗಳನ್ನು ನೀಡುವ ಬದಲು ಪರಿಸ್ಥಿತಿ ತಿಳಿಗೊಳಿಸಿ ಶಾಶ್ವತ ಶಾಂತಿ ಸ್ಥಾಪನೆಯತ್ತ ಗಮನ ಹರಿಸುವುದು ಉತ್ತಮ ಎಂದು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಹೇಳಿದ್ದಾರೆ.

ಹೊರ್ಮುಜ್ ಜಲಸಂಧಿಯನ್ನು ಸ್ವತಂತ್ರಗೊಳಿಸಲು ಮಿಲಿಟರಿ ಕಾರ್ಯಾಚರಣೆ ನಡೆಸುವುದು “ಅವಾಸ್ತವಿಕ” ಎಂದೂ ಮ್ಯಾಕ್ರನ್ ಹೇಳಿದ್ದಾರೆ. ಹರ್ಮುಜ್ ಜಲಸಂಧಿಯನ್ನು ಬ್ರಿಟನ್ ನೇತೃತ್ವದಲ್ಲಿ ಮಿಲಿಟರಿ ಕಾರ್ಯಾಚರಣೆಯ ಮೂಲಕ ಬಲವಂತವಾಗಿ ವಿಮೋಚನೆಗೊಳಿಸಬೇಕು ಎಂದು ಪ್ರತಿಪಾದಿಸುವವರಿದ್ದಾರೆ, ಇದು ಅವಾಸ್ತವಿಕ. ಏಕೆಂದರೆ ಇದು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ ಮತ್ತು ಜಲಸಂಧಿಯನ್ನು ದಾಟುವ ಪ್ರತಿಯೊಬ್ಬರು ಇರಾನಿನ ಕ್ರಾಂತಿಕಾರಿ ಗಾರ್ಡ್‌ಗಳಿಂದ ಬೆದರಿಕೆ ಎದುರಿಸಬೇಕಾಗುತ್ತದೆ. ಹೀಗಾಗಿ ಕದನ ವಿರಾಮ ಘೋಷಿಸಬೇಕು ಎಂದು ಮ್ಯಾಕ್ರನ್ ಸ್ಪಷ್ಟವಾಗಿ ಹೇಳಿದ್ದಾರೆ.

ಮ್ಯಾಕ್ರನ್ ದಕ್ಷಿಣ ಕೊರಿಯಾಕ್ಕೆ ಭೇಟಿ ನೀಡಿದಾಗ , ಟ್ರಂಪ್ ಅಮೆರಿಕದ ಮೈತ್ರಿಕೂಟದ ಬದ್ಧತೆಯ ಬಗ್ಗೆ ನಿತ್ಯವೂ ಅನುಮಾನ ಸೃಷ್ಟಿಸುವ ಮೂಲಕ ಉತ್ತರ ಆಟ್ಲಾಂಟಿಕ್ ಟ್ರೀಟಿ ಆರ್ಗ್ನೈಸೇಷನ್ (ನ್ಯಾಟೋ)ಅನ್ನು ದುರ್ಬಲಗೊಳಿಸಿದ್ದಾರೆ ಎಂದು ಆರೋಪಿಸಿದರು.

ಮಿತ್ರರಾಷ್ಟ್ರಗಳು ಇರಾನ್ ವಿರುದ್ಧ ಅಮೆರಿಕದ ಮಿಲಿಟರಿ ಕ್ರಮವನ್ನು ಬೆಂಬಲಿಸಲು ವಿಫಲವಾದ ನಂತರ ಅಮೆರಿಕ ನ್ಯಾಟೋದಿಂದ ಹೊರಬರುವ ಬಗ್ಗೆ ಪರಿಗಣಿಸುತ್ತಿರುವುದಾಗಿ ಟ್ರಂಪ್ ಹೇಳಿದ್ದರು. ನ್ಯಾಟೋವನ್ನು ಪೇಪರ್ ಟೈಗರ್ ಎಂದು ಟೀಕಿಸಿದ್ದಾರೆ. ದೊಡ್ಡ ಯುದ್ಧ ಬಂದರೆ ನ್ಯಾಟೋ ನಿಷ್ಪ್ರಯೋಜಕವಾಗಲಿದೆ ಎಂದಿದ್ದಾರೆ. ಅಮೆರಿಕಕ್ಕೆ ತಮ್ಮ ಸೇನಾ ನೆಲೆಗಳನ್ನು ಬಳಸಲು ಅವಕಾಶ ನೀಡದಿರುವ ಯುರೋಪಿಯನ್ ರಾಷ್ಟ್ರಗಳ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ಅಮೆರಿಕವನ್ನು ನ್ಯಾಟೋದಿಂದ ಹೊರತರುವ ಬಗ್ಗೆಯೂ ಚಿಂತನೆ ನಡೆಸುತ್ತಿರುವುದಾಗಿ ಟ್ರಂಪ್‌ ಹೇಳಿಕೆ ನೀಡಿದ್ದಾರೆ.

Related Posts

Leave a Reply

Your email address will not be published. Required fields are marked *