ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ನಗರ ಪೊಲೀಸ್ ಮಹಿಳಾ ಸಿಬ್ಬಂದಿಗೆ ಉಚಿತ ಸರ್ವೈಕಲ್ ಕ್ಯಾನ್ಸರ್‌ನ ಲಸಿಕೆ ಹಾಗೂ ಕ್ಯಾನ್ಸರ್ ತಪಾಸಣೆಯನ್ನು ನಡೆಸಲಾಯಿತು.
ಮಹಿಳಾ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಉಚಿತ ಲಸಿಕೆ ಹಾಗೂ ಆರೋಗ್ಯ ತಪಾಸಣಾ ಕಾರ್ಯಕ್ರಮಕ್ಕೆ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಬಿ. ದಯಾನಂದ ಅವರು, ರಾಜ್ಯದ ಕಾನೂನು ಸುವ್ಯವಸ್ಥೆ ನಿರ್ವಹಣೆಯಲ್ಲಿ ಪೊಲೀಸ್ ಮಹಿಳಾ ಸಿಬ್ಬಂದಿಯ ಕಾರ್ಯ ಅತ್ಯಂತ ಅವಶ್ಯಕ. ಆದರೆ, ಕರ್ತವ್ಯ ನಿರ್ವಹಣೆಯ ಭರದಲ್ಲಿ ತಮ್ಮ ಆರೋಗ್ಯದ ಬಗ್ಗೆಯೂ ಮಹಿಳಾ ಸಿಬ್ಬಂದಿ ಗಮನ ನೀಡಬೇಕು. ಅಪಾಯಕಾರಿ ಕ್ಯಾನ್ಸರ್‌ಗಳ ತಪಾಸಣೆಯನ್ನು ಆಗಾಗ್ಗೇ ಮಾಡಿಸುತ್ತಿರಬೇಕು. ಎಚ್‌ಸಿಜಿ ಕ್ಯಾನ್ಸರ್ ಕೇಂದ್ರವು, ಪೊಲೀಸ್ ಮಹಿಳಾ ಸಿಬ್ಬಂದಿಗೆ ಉಚಿತ ಸರ್ವೈಕಲ್ ಕ್ಯಾನ್ಸರ್ ಲಸಿಕೆ ನೀಡುತ್ತಿರುವುದು ಶ್ಲಾಘನೀಯ. ಮಹಿಳಾ ಸಿಬ್ಬಂದಿಯು ತಾವು ಆರೋಗ್ಯವಾಗಿದ್ದರೆ ಕಾನೂನು ಸುವ್ಯವಸ್ಥೆಯನ್ನು ಇನ್ನಷ್ಟು ಶಕ್ತವಾಗಿ ಸೇವೆ ಸಲ್ಲಿಸಲು ಸಾಧ್ಯ ಎಂದು ಹೇಳಿದರು.
ಎಚ್‌ಸಿಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್. ಮನೀಶಾ ಕುಮಾರ್ ಮಾತನಾಡಿ, ಪ್ರತಿಯೊಬ್ಬ ಮಹಿಳೆಯರೂ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ನಮ್ಮ ರಾಜ್ಯದ ಕಾನೂನು ಕಾಪಾಡುವ ಮಹಿಳಾ ಸಿಬ್ಬಂದಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಈ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಮಗೆ ಅವಕಾಶ ನೀಡಿದೆ. ಮಹಿಳೆ ಆರೋಗ್ಯವಾಗಿದ್ದರೇ ಇಡೀ ಸಮಾಜವೇ ಆರೋಗ್ಯವಾಗಿದ್ದಂತೆ ಎಂದರು.
ಕಾರ್ಯಕ್ರಮದಲ್ಲಿ ನಗರದ 250ಕ್ಕೂ ಹೆಚ್ಚು ಮಹಿಳಾ ಪೊಲೀಸ್ ಸಿಬ್ಬಂದಿಗೆ ಉಚಿತವಾಗಿ ಸರ್ವೈಕಲ್ ಕ್ಯಾನ್ಸರ್ ಲಸಿಕೆ ನೀಡಲಾಯಿತು. ಜೊತೆಗೆ, ಸ್ತನ ಕ್ಯಾನ್ಸರ್, ಪಿಎಪಿ ಸ್ಪೀಯರ್ ಟೆಸ್ಟ್ ಸೇರಿದಂತೆ ಹಲವು ತಪಾಸಣೆ ನಡೆಸಲಾಯಿತು.
ಈ ವೇಳೆ ಪೊಲೀಸ್ ನಿರ್ವಹಕ ಜಂಟಿ ಆಯುಕ್ತರಾದ ಕುಲ್ದೀಪ್ ಕುಮಾರ್ ಆರ್ ಜೈನ್, ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್, ಹೆಚ್ಚುವರಿ ಪೊಲೀಸ್ ಆಯುಕ್ತ ಚಂದ್ರಗುಪ್ತಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.