ಬೆಂಗಳೂರು:ಆಧುನಿಕ ಸಲಕರಣೆಗಳನ್ನು ಬಳಕೆ ಮಾಡಿಕೊಂಡು ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಿ ಟೆಲಿಕಾಂ ಸಂಸ್ಥೆಗೆ ಆರ್ಥಿಕ ನಷ್ಟ ಉಂಟು ಮಾಡುವ ಜೊತೆಗೆ, ರಾಷ್ಟ್ರೀಯ ಭದ್ರತೆಗೂ ಆತಂಕ ಸೃಷ್ಟಿಸಿದ ವಿವಿಧ ಸೈಬರ್ ಅಪರಾಧಗಳಲ್ಲಿ ತೊಡಗಿಸಿಕೊಂಡಿದ್ದ ಜಾಲವನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಾಳಿಯಲ್ಲಿ 40 ಲಕ್ಷ ಮೌಲ್ಯದ 28 ಸಿಮ್ ಬಾಕ್ಸ್ ವಿವಿಧ ಕಂಪನಿಗಳ 1193 ಸಿಮ್ ಕಾರ್ಡ್ ಗಳು,ಲ್ಯಾಪ್‌ಟಾಪ್, ರೂಟರ್ ಗಳನ್ನು ವಶಪಡಿಸಿಕೊಂಡು ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಶೋಧ ನಡೆಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ನ.28ರಂದು ವೋಡಾಫೋನ್ ಲಿಮಿಟೆಡ್‌ನ ನೋಂದಣಿ ಅಧಿಕಾರಿಯೊಬ್ಬರು ಕಮೀಷನರ್ ಕಚೇರಿಯ ಸೈಬರ್‌ಕ್ರೈಂ ಠಾಣೆ ಸಿಓಪಿ ಕಛೇರಿಯಲ್ಲಿ ದಾಖಲಿಸಿದ ದೂರಿನ ಆಧಾರದ ಮೇಲೆ ನಡೆದ ತನಿಖೆಯಲ್ಲಿ ಎಲೆಕ್ಟ್ರಾನಿಕ್ ಸಿಟಿ ಫೇಸ್-2 ನಲ್ಲಿರುವ ವಸತಿ ಗೃಹವೊಂದರಲ್ಲಿ ನಡೆಸುತ್ತಿದ್ದ ಡೇಟಾ ಸೆಂಟರ್ ಮೇಲೆ ದಾಳಿ ನಡೆಸಿ ಅಂತರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತನೆ ಮಾಡುವುದನ್ನು ಪತ್ತೆಹಚ್ಚಲಾಗಿದೆ ಎಂದು ಹೇಳಿದರು.
ಸೆಂಟರ್ ನಲ್ಲಿ ಅಂತರರಾಷ್ಟ್ರೀಯ ಕರೆಗಳನ್ನು ಅಕ್ರಮವಾಗಿ ಸ್ಥಳೀಯ ಕರೆಗಳಾಗಿ ಪರಿವರ್ತಿಸಿ ಅದರಿಂದ ಸೈಬರ್ ಅಪರಾಧಗಳನ್ನು ಮಾಡಿ ರಾಷ್ಟ್ರೀಯ ಭದ್ರತೆಗೆ ಧಕ್ಕೆ ಉಂಟು ಮಾಡುವುದರ ಜೊತೆಗೆ ಸರ್ಕಾರ ಹಾಗೂ ಟೆಲಿಕಾಂ ಸಂಸ್ಥೆಗೆ ಆರ್ಥಿಕ ನಷ್ಟ ಉಂಟು ಮಾಡಿರುವುದು ಪತ್ತೆಯಾಗಿದೆ.
ತನಿಖೆಯಿಂದ ವಶಪಡಿಸಿಕೊಂಡ ಸಿಮ್ ಕಾರ್ಡ್‌ಗಳನ್ನು ಇತರೆ ಸೈಬರ್ ಅಪರಾಧಗಳಿಗೂ ಬಳಸಿರುವ ಸಾಧ್ಯತೆ ಕಂಡುಬಂದಿದ್ದು ಸಿಮ್ ಬಾಕ್ಸ್ ನ್ನು ಇತರೆ ಸೈಬರ್ ಅಪರಾಧಗಳಲ್ಲಿ ಬಳಸಿರುವ ಸಾಧ್ಯತೆ ಕಂಡು ಬಂದಿದ್ದು, ಸಿಮ್ ಬಾಕ್ಸ್‌ನ್ನು ಇತರ ಯಾವುದೇ ಸೈಬರ್ ಅಪರಾಧಗಳಿಗೆ ಬಳಸಿದ್ದಾರೆಯೇ ಎಂಬುದರ ಕುರಿತು ತನಿಖೆ ಮುಂದುವರೆದಿದೆ ಹಾಗೂ ಆರೋಪಿಗಳ ಪತ್ತೆಕಾರ್ಯ ಪ್ರಗತಿಯಲ್ಲಿರುತ್ತದೆ.
ಈ ಕಾರ್ಯಚರಣೆ ಅಕ್ರಮ ಟೆಲಿಕಾಂ ವಿನಿಮಯವನ್ನು ತಡೆಹಿಡಿಯಲು, ರಾಷ್ಟ್ರೀಯ ಭದ್ರತೆಯನ್ನು ಕಾಪಾಡಲು ಹಾಗೂ ಸರ್ಕಾರ ಮತ್ತು ಟೆಲಿಕಾಂ ಸಂಸ್ಥೆಗಳ ಆರ್ಥಿಕ ಹಿತಾಸಕ್ತಿಯನ್ನು ರಕ್ಷಿಸಲು ಅಧಿಕಾರಿಗಳ ಬದ್ಧತೆಯನ್ನು ಎತ್ತಿ ಹಿಡಿಯಲು ಸಹಾಯವಾಗಿದೆ. ಪ್ರಕರಣದಲ್ಲಿ ಆರೋಪಿಯು ಕೇರಳ ಮೂಲದವನಾಗಿದ್ದು, ದುಬೈನಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಮಾಹಿತಿಯಿದ್ದು ಆತನ ಬಂಧನ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಜಂಟಿ ಪೊಲೀಸ್ ಆಯುಕ್ಯ ಅಜಯ್ ಹಿಲೋರಿ ಮೇಲ್ವಿಚಾರಣೆಯಲ್ಲಿ ಡಿಸಿಪಿ ರಾಜ ಇಮಾಮ್ ಕಾಸಿಂ ರವರ ನೇತೃತ್ವದಲ್ಲಿ ಆಂತರಿಕ ಭದ್ರತೆ ವಿಭಾಗ ಹಾಗೂ ದೂರ ಸಂಪರ್ಕ ಇಲಾಖೆ ಅಧಿಕಾರಿಗಳ ತಂಡದೊಂದಿಗೆ ಇನ್ಸ್‌ಪೆಕ್ಟರ್ ಗಳಾದ ಉಮೇಶ್ ಕುಮಾರ್, ಗೌರಿಶಂಕರ್ ಮತ್ತವರ ಸಿಬ್ಬಂದಿ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಎಲ್ಲಾ ಡೇಟಾಸೆಂಟರ್‌ಗಳು ತಮ್ಮಲ್ಲಿ ಅಳವಡಿಸಲ್ಪಡುವ ಮೂಲ ಸೌಕರ್ಯಗಳನ್ನು ಸೂಕ್ತವಾಗಿ ಪರಿಶೀಲಿಸಿ ಅಕ್ರಮವಾಗಿ ಸಿಮ್‌ಬಾಕ್ಸ್ ಗಳು, ಕಂಡು ಬಂದಲ್ಲಿ ತಕ್ಷಣವೇ ನಗರ ಪೊಲೀಸರಿಗೆ ಮಾಹಿತಿ ನೀಡುವಂತೆ ಕಮೀಷನರ್ ಮನವಿ ಮಾಡಿದರು.


