ಸಕಲೇಶಪುರ ಚಿಕ್ಕನಾಯಕನಹಳ್ಳಿ ಗ್ರಾಮದಲ್ಲಿ ವಯಸ್ಸಾಗಿರುವ ಮಹಿಳೆ ಬದುಕಿರುವಾಗಲೇ ವ್ಯಕ್ತಿಯೊಬ್ಬ ಮೋಸದಿಂದ ಮರಣ ಪ್ರಮಾಣ ಪತ್ರ ಮಾಡಿಸಿ ಆಸ್ತಿ ಲಪಟಾಯಿಸಿದ ಆರೋಪ ಕೇಳಿ ಬಂದಿದೆ.
ಗ್ರಾಮದ ಮಹಿಳೆ ಸಿದ್ದಮ್ಮ ಅವರ ಹೆಸರಿನಲ್ಲಿ ಸರ್ವೆ ನಂ.68 ರಲ್ಲಿ 1 ಎಕರೆ 20 ಗುಂಟೆ ಭೂಮಿ ಇದೆ. ಬಾಳ್ಳುಪೇಟೆ ಗ್ರಾಮದ ಶೇಖ್ ಅಹಮದ್ ಎಂಬಾತ ದತ್ತು ಪುತ್ರ ಎಂದು ವಂಶ ವೃಕ್ಷ ಮಾಡಿಸಿ, 2008 ರಲ್ಲೇ ಸಿದ್ದಮ್ಮ ವಿಲ್ ಮಾಡಿದಂತೆ ನಕಲಿ ದಾಖಲೆ ಸೃಷ್ಟಿ ಮಾಡಿದ್ದಾನೆ. 2009ರ ಅ.4 ರಂದು ಮರಣ ಹೊಂದಿರುವುದಾಗಿ ಮರಣ ಪ್ರಮಾಣ ಪತ್ರ ಮಾಡಿಸಿ ಭೂಮಿಯನ್ನು ಲಪಟಾಯಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಶೇಖ್ ಅಹಮದ್ ವಿರುದ್ಧ ಮಹಿಳೆ ಸಿದ್ದಮ್ಮ ಹಾಗೂ ಪುತ್ರ ನಿಂಗರಾಜು ದೂರು ನೀಡಿದ್ದಾರೆ. ಆರೋಪಿ ವಿರುದ್ಧ ಸೂಕ್ತ ಕ್ರಮಕ್ಕೆ ಸಿದ್ದಮ್ಮ ಕುಟುಂಬಸ್ಥರು ಆಗ್ರಹಿಸಿದ್ದಾರೆ. ನಕಲಿ ದಾಖಲೆ ಸೃಷ್ಟಿಸಲು ನೆರವಾದ ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕ, ಉಪ ತಹಶೀಲ್ದಾರ್ ಸೇರಿ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಹಾವೇರಿಯಲ್ಲಿ ಯಾರದೋ ಜಾಗ ತೋರಿಸಿ ಉದ್ಯಮಿಗೆ 25 ಲಕ್ಷ ರೂ. ವಂಚನೆ
ಹಾವೇರಿಯಲ್ಲಿ ವಂಚಕನೊಬ್ಬ ಉದ್ಯಮಿಯೊಬ್ಬರಿಗೆ ಜಾಗ ತೋರಿಸಿ 25 ಲಕ್ಷ ರೂ. ವಂಚಿಸಿದ್ದಾನೆ. ಕಾರವಾರದ ಸಾಯಿನಾಥ್ ಶಿಗ್ಗಾಂವಿಯ ಇರ್ಷಾದ್ ಖಾನ್‌ಗೆ ಆಮಿಷ ತೋರಿಸಿ 25 ಲಕ್ಷ ರೂ. ಚೀಲದಲ್ಲಿ ತುಂಬಿಕೊಂಡು ಪರಾರಿಯಾಗಿದ್ದಾನೆ. ಸಾಯಿನಾಥ್ ಕಾರವಾರ ನಗರದ ನಿವಾಸಿ. ಅಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಆಗಿ ಕೆಲಸ ಮಾಡುತ್ತಿದ್ದ. ಕೆಲಸಕ್ಕೆ ರಾಜೀನಾಮೆ ಕೊಟ್ಟು ಜನರನ್ನು ವಂಚಿಸಿ ಹಣ ಮಾಡುವುದರಲ್ಲಿ ತೊಡಗಿದ್ದಾನೆಂದು ಆರೋಪಿಸಲಾಗಿದೆ.
ಇರ್ಷಾದ್ ಖಾನ್ ರಸ್ತೆ ಬಳಿ ಹೋಟೆಲ್ ನಿರ್ಮಿಸಲು ಕಮರ್ಷಿಯಲ್ ಪ್ರಾಪರ್ಟಿ ಹುಡುಕ್ತಿದ್ದರು. ಆಗ ಸಾಯಿನಾಥ್ ಪರಿಚಯ ಆಗಿ, ಕಾರವಾರ – ಅಂಕೋಲಾ ರಸ್ತೆ ಪಕ್ಕ ಯಾರದ್ದೋ ಜಾಗ ತೋರಿಸಿನಂಬಿಸಿದ್ದಾನೆ. ಅಕೌಂಟ್ ಮೂಲಕ ಬೇಡ, ನನ್ನ ಅಕೌಂಟ್‍ಗೆ ಹಾಕಿಸಿ ಆರ್‌ಟಿಸಿ ಮಾಡುತ್ತೇನೆ ಎಂದು 25 ಲಕ್ಷ ರೂ. ತೆಗೆದುಕೊಂಡು ಹೋಗಿದ್ದಾನೆ.
ಸಾಯಿನಾಥ್‍ಗೆ ಹಣ ಕೊಟ್ಟ ವೀಡಿಯೊ ಮಾಡಿಕೊಂಡಿದ್ದು, ಈಗ ಹಣ, ಜಾಗ ಇಲ್ಲದೆ ಖಾನ್ ಇರ್ಷಾದ್ ಖಾನ್ ಕಂಗೆಟ್ಟಿದ್ದು, ಸಾಯಿನಾಥ್‍ಗೆ ಕೇಳಿದರೆ ಹಣ ಕೊಡಲ್ಲ, ಯಾವಾಗ ಕೊಟ್ಟಿದ್ದಿಯಾ, ಪೊಲೀಸ್ ಕಂಪ್ಲೇಂಟ್ ಮಾಡು ಎಂದು ಬೆದರಿಸುತ್ತಿರುವುದಾಗಿ ದೂರಿ ಇರ್ಷಾದ್ ಕೋರ್ಟ್ ಮೊರೆ ಹೋಗಿದ್ದಾರೆ.


