ಮಂಗಳೂರು ಜಿಲ್ಲಾ ಪೊಲೀಸರು ಬೃಹತ್ ವಂಚನಾ ಜಾಲವೊಂದನ್ನು ಭೇದಿಸಿದ್ದು, ಉದ್ಯಮಿಗಳಿಗೆ ನೂರಾರು ಕೋಟಿ ಸಾಲ ಕೊಡಿಸುವುದಾಗಿ ನಂಬಿಸಿ ಕೋಟಿ ಕೋಟಿ ವಂಚನೆ ಮಾಡುತ್ತಿದ್ದ ವಂಚಕನನ್ನು ಬಂಧಿಸಿದ್ದಾರೆ. ವಂಚನೆಯ ಕಿಂಗ್ ಪಿನ್ ರೊನಾಲ್ಡ್ ಸಲ್ದಾನಾ ಬಂಧಿತ.
ರೊನಾಲ್ಡ್ ಸಲ್ದಾನಾ ಕಾರ್ಯಾಚರಿಸುತ್ತಿದ್ದ ಜಪ್ಪಿನಮೊಗರು ಎಂಬಲ್ಲಿನ ಐಷಾರಾಮಿ ಬಂಗಲೆಯ ಮೇಲೆ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಆರೋಪಿ ರೊನಾಲ್ಡ್ ಸಲ್ದಾನಾ ತಾನು ಉದ್ಯಮಿಯೆಂದು ಬಿಂಬಿಸಿ ಹೊರರಾಜ್ಯ, ಹೊರಜಿಲ್ಲೆಯಲ್ಲಿರುವ ಐಷಾರಾಮಿ ವ್ಯಕ್ತಿಗಳನ್ನೇ ಟಾರ್ಗೆಟ್ ಮಾಡಿ ಜಾಗದ ವ್ಯವಹಾರ, ಸಾಲ ನೀಡುವ ನೆಪದಲ್ಲಿ ನಂಬಿಕೆ ಗಳಿಸುತ್ತಿದ್ದ. ದೇಶದ ಪ್ರಮುಖ ನಗರಗಳಲ್ಲಿ ವಂಚನೆಗಾಗಿ ಏಜೆಂಟರ್‌ಗಳನ್ನು ಇರಿಸಿಕೊಂಡು ಅವರ ಮೂಲಕ ಡೀಲ್ ಕುದುರಿಸಲು ಮಂಗಳೂರಿನ ಐಷಾರಾಮಿ ಮನೆಗೆ ಕರೆಸುತ್ತಿದ್ದ. ತಾನೊಬ್ಬ ಅಗರ್ಭ ಶ್ರೀಮಂತ ಎಂಬಂತೆ ಪೋಸ್ ನೀಡುತ್ತಿದ್ದ.
ಮನೆಯಲ್ಲಿನ ಚಿನ್ನ, ವಿದೇಶಿ ಮದ್ಯಗಳು, ಮಲೇಶಿಯನ್ ಹುಡುಗಿಯರು ಎಲ್ಲವನ್ನು ಮನೆಗೆ ಬಂದ ಉದ್ಯಮಿಗಳಿಗೆ ನೀಡುತ್ತಿದ್ದ. ಐಷಾರಾಮಿ ಮನೆ,ನ ಆತಿಥ್ಯ ನೋಡಿಯೇ ಉದ್ಯಮಿಗಳು ಖೆಡ್ಡಾಕ್ಕೆ ಬೀಳುತ್ತಿದ್ದರು. 50 ರಿಂದ 100 ಕೋಟಿ ರೂ. ಅಥವಾ ಅದಕ್ಕಿಂತ ದೊಡ್ಡ ಮೊತ್ತದ ಸಾಲ ನೀಡಲು 5-10 ಕೋಟಿ ರೂ. ಸ್ಟ್ಯಾಂಪ್ ಡ್ಯೂಟಿ ನೀಡುವಂತೆ ಕೇಳುತ್ತಿದ್ದ. ಆತನ ಮಾತಿಗೆ ಮರುಳಾಗಿ ಉದ್ಯಮಿಗಳು ಕೋಟ್ಯಂತರ ರೂ. ನಗದು ರೂಪದಲ್ಲಿ ನೀಡುತ್ತಿದ್ದರು.
ಹಣ ವಸೂಲಿಯಾದ ಬಳಿಕ ನಾನಾ ಕಾರಣ ಹೇಳಿ ಮೊಬೈಲ್ ಸ್ವಿಚ್ಛ್ ಆಫ್ ಮಾಡಿ ಉದ್ಯಮಿಗಳಿಂದ ಎಸ್ಕೇಪ್ ಆಗುತ್ತಿದ್ದ. ಹೀಗೆ ವಂಚನೆಗೊಳಗಾದ ಇಬ್ಬರು ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಏಕಾಏಕಿ ಮನೆಗೆ ದಾಳಿ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ.
ಮೂರು ತಿಂಗಳಲ್ಲೇ 45 ಕೋಟಿ ರೂ. ವಂಚಿಸಿದ್ದು, ಈವರೆಗೂ 200 ಕೋಟಿ ರೂ. ಅಧಿಕ ಹಣ ವಂಚಿಸಿರುವುದು ಪತ್ತೆಯಾಗಿದೆ. ಬಂಗಲೆಯಲ್ಲಿಯೇ ಸೀಕ್ರೆಟ್ ಅಡಗು ತಾಣ ಮಾಡಿಕೊಂಡು, ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ಲಿಂಕ್ ಮಾಡಿಸಿದ್ದ. ಮನೆಯ ಸುತ್ತ ಸಿಸಿ ಕ್ಯಾಮೆರಾ ಹಾಕಿಸಿಕೊಂಡು ಮೋಸ ಹೋದವರು ಹಣ ಕೇಳಲು ಬಂದರೆ ಸೀಕ್ರೆಟ್ ರೂಮ್‌ಗೆ ಹೋಗಿ ಮನೆಯಲ್ಲಿ ಯಾರೂ ಇಲ್ಲ ಎಂಬಂತೆ ಬಿಂಬಿಸುತ್ತಿದ್ದ.
ಆರೋಪಿಯ ಬ್ಯಾಂಕ್ ಖಾತೆಗಳಲ್ಲಿ 40 ಕೋಟಿ ರೂ. ಪತ್ತೆಯಾಗಿದೆ. ಬೇರೆ ಬೇರೆ ಕಡೆಗಳಲ್ಲಿ ಉದ್ಯಮ ನಡೆಸುತ್ತಿದ್ದು, ಕೋಟ್ಯಂತರ ರೂಪಾಯಿ ಬಂಡವಾಳ ಹಾಕಿದ್ದ. ಹೆಂಡತಿ ಹಾಗೂ ಮಗುವಿನೊಂದಿಗೆ ಚೆನ್ನೈನಲ್ಲಿ ವಾಸವಾಗಿದ್ದು, ಹೆಂಡತಿಯ ಹೆಸರಿನಲ್ಲೂ ಹಲವು ಉದ್ಯಮ ನಡೆಸುತ್ತಿದ್ದ ಎನ್ನುವುದು ತಿಳಿದು ಬಂದಿದೆ.