ಸಹಕಾರ ಬ್ಯಾಂಕ್‌ಗಳಿಗೆ 439.12 ಕೋಟಿ ರೂ. ವಂಚನೆ ಪ್ರಕರಣ ಸಂಬಂಧ ಶಾಸಕ ರಮೇಶ್ ಜಾರಕಿಹೊಳಿ ಮತ್ತವರ ಇಬ್ಬರು ಆಪ್ತರ ವಿರುದ್ಧ ಸಿಐಡಿ ನ್ಯಾಯಾಲಯಕ್ಕೆ ನಾಲ್ಕು ಸಾವಿರಕ್ಕೂ ಹೆಚ್ಚಿನ ಪುಟಗಳ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದೆ.
ರಾಜ್ಯ ಅಪೆಕ್ಸ್ ಬ್ಯಾಂಕ್ ಹಾಗೂ ಅದರ ಸಮೂಹದ ನಾಲ್ಕು ಜಿಲ್ಲಾ ಸಹಕಾರಿ ಬ್ಯಾಂಕ್‌ಗಳಿಂದ (ಡಿಸಿಸಿ) ಗೋಕಾಕ್ ತಾಲೂಕಿನಲ್ಲಿ ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಕಂಪನಿ ಸ್ಥಾಪನೆ ಮತ್ತು ವಿಸ್ತರಣೆಗೆ ಸಾಲ ಪಡೆದು ಮಾಜಿ ಸಚಿವರು ಹಾಗೂ ಅವರ ಆಪ್ತರು ವಂಚಿಸಿರುವುದು ತನಿಖೆಯಲ್ಲಿ ರುಜುವಾಗಿದೆ ಎಂದು ದೋಷಾ ರೋಪ ಪಟ್ಟಿಯಲ್ಲಿ ಸಿಐಡಿ ತಿಳಿಸಿದೆ.
ಸಕ್ಕರೆ ಕಂಪನಿಯ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರೂ ಆಗಿದ್ದ ರಮೇಶ್ ಜಾರಕಿಹೊಳಿ ತಮ್ಮ ವಿರುದ್ಧದ ವಂಚನೆ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ಗೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು, ಸಿಐಡಿಗೆ ದೋಷಾರೋಪ ಪಟ್ಟಿ ಸಲ್ಲಿಕೆಗೆ ಅನುಮತಿ ನೀಡಿತ್ತು.
2024ರ ಜನವರಿಯಲ್ಲಿ ವಿ.ವಿ.ಪುರ ಪೊಲೀಸ್ ಠಾಣೆಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಅವರ ಆಪ್ತರ ವಿರುದ್ಧ ರಾಜ್ಯ ಆಪೆಕ್ಸ್ ಬ್ಯಾಂಕ್ ವ್ಯವಸ್ಥಾ ಪಕರಾದ ರಾಜಣ್ಣ ದೂರು ನೀಡಿದ್ದರು. ಬಳಿಕ ಸರ್ಕಾರವು ಪ್ರಕರಣದ ಸಿಐಡಿ ತನಿಖೆಗೆ ಆದೇಶಿಸಿತ್ತು. ಈಗ ಡಿಜಿಪಿ ಡಾ। ಎಂ.ಸಲೀಂ ಅವರ ಮಾರ್ಗದರ್ಶನ ದಲ್ಲಿ ತನಿಖೆ ಪೂರ್ಣಗೊಳಿಸಿ ಎಸ್ಪಿ ರಾಘವೇಂದ್ರ ಹೆಗಡೆ ನೇತೃತ್ವದ ತಂಡವು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದೆ.