ವಾಸವಿ ಸ್ವಗೃಹ ಹೋಮ್ ನೀಡ್ಸ್ ಆ್ಯಂಡ್ ಕನ್ಸಲ್ಟನ್ಸ್ ಹೆಸರಲ್ಲಿ ವಿಶ್ವನಾಥ್ ಎಂಬಾತ ಜನರಿಗೆ ಆಮಿಷವೊಡ್ಡಿ ಹಣ ಪಡೆದು ವಂಚನೆ ಮಾಡಿರುವುದಾಗಿ ಬಳ್ಳಾರಿಯ ಬ್ರೂಸ್ ಪೇಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂರು ವರ್ಷದ ಹಿಂದೆ ವಿಶ್ವನಾಥ ಕಿರಾಣಿ ಅಂಗಡಿ ಆರಂಭಿಸಿ, ಐದು ಸಾವಿರ ರೂ. ಕಿರಾಣಿ ಪಡೆದರೆ ಎರಡು ಸಾವಿರ ರೂ. ಮೌಲ್ಯದ ಅಡುಗೆ ಎಣ್ಣೆ ಕೊಡುವು ದಾಗಿ ಆಮಿಷ ಒಡ್ಡಿದ್ದರಂತೆ. ಹದಿನೈದು ಸಾವಿರ ರೂ. ಕೊಟ್ಟರೆ ತಿಂಗಳ ನಂತರ 20 ಸಾವಿರ ರೂ. ಕೊಡುವುದಾಗಿ ಮತ್ತು ಲಕ್ಷ ಲಕ್ಷ ಹಣ ಕೊಟ್ಟವರಿಗೆ 40% ಬಡ್ಡಿ ಕೊಡುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ ಎಂದು ದೂರಲಾಗಿದೆ.
ಅಮಾಯಕ ಜನರಿಂದ ಕೋಟ್ಯಂತರ ರೂ ಲೂಟಿ ಮಾಡಿ ಆರೋಪಿ ವಿಶ್ವಾಥ ಪರಾರಿ ಆಗಿದ್ದು, ಅಂದಾಜು 50 ಕೋಟಿಗೂ ಹೆಚ್ಚು ಹಣ ಪಡೆದು ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ನಮಗೆ ನ್ಯಾಯ ಕೊಡಿಸಿ ಎಂದು ಜನರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಎರಡು ತಿಂಗಳ ಕಿರಾಣಿ ತೆಗೆದುಕೊಂಡರೆ ಒಂದು ತಿಂಗಳ ಕಿರಾಣಿ ಉಚಿತ ಕೊಟ್ಟಿದ್ದ ವಿಶ್ವನಾಥ, ಹಲವು ಸ್ಕೀಂಗಳನ್ನ ನೀಡಿ ಆಮಿಷವೊಡ್ಡಿ ಜನರಿಂದ ಹಣ ವಸೂಲಿ ಮಾಡಿದ್ದ. ನಂಬಿದ ಜನರು ಒಬ್ಬೊಬ್ಬರು ಮೂರು ಲಕ್ಷ, ಐದು ಲಕ್ಷ ಹೀಗೆ ಹತ್ತು ಲಕ್ಷದವರೆಗೆ ಹಣ ಹೂಡಿಕೆ ಮಾಡಿದ್ದಾರೆ. 50 ಕೋಟಿಗೂ ಹೆಚ್ಚು ಹಣ ಪಡೆದು ವಂಚಿಸಲಾಗಿದೆ ಎಂದು ಆರೋಪಿಸಲಾಗಿದೆ. ವಂಚನೆ ಪ್ರಕರಣ ದಾಖಲಾಗುತ್ತಿದ್ದಂತೆ ಮನೆಗೆ ಬೀಗ ಹಾಕಿ ವಿಶ್ವನಾಥ್ ಪರಾರಿಯಾಗಿದ್ದಾನೆ.