ಜೈಪುರ: ಚಿನ್ನ ಹಾಗೂ ಬೆಳ್ಳಿಯ ವಸ್ತುಗಳಿಗಾಗಿ ಇಂಗು ಗುಂಡಿಗೆ ಇಳಿಸಲಾದ ನಾಲ್ವರು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟ ಆಘಾತಕಾರಿ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
ಆಭರಣ ಕಾರ್ಖಾನೆಯ 10 ಅಡಿ ಆಳದ ಇಂಗು ಗುಂಡಿಗೆ (ಸೆಪ್ಟಿಕ್ ಟ್ಯಾಂಕ್) ಗೆ ಇಳಿದ ನಾಲ್ವರು ಕಾರ್ಮಿಕರು ಮೃತಪಟ್ಟರೆ, ಉಳಿದ ನಾಲ್ವರು ಅಸ್ವಸ್ಥಗೊಂಡಿದ್ದಾರೆ.
ಸೀತಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಯ 10 ಅಡಿ ಆಳದ ಗುಂಡಿಯ ಕೆಸರಿನಲ್ಲಿ ಸಿಲುಕಿದ್ದ ಚಿನ್ನ ಹಾಗೂ ಬೆಳ್ಳಿ ವಸ್ತುಗಳನ್ನು ತೆಗೆಯಲು ಕಾರ್ಮಿಕರನ್ನು ಇಳಿಸಲಾಗಿತ್ತು.
ಸೋಮವಾರ ಸಂಜೆ ಅಚಲ್ ಜ್ಯುವೆಲ್ಸ್ ಕಾರ್ಖಾನೆಯಲ್ಲಿ ಈ ಘಟನೆ ನಡೆದಿದೆ. ಗಾಯಗೊಂಡ ನಾಲ್ವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಉಳಿದವರನ್ನು ಪ್ರಾಥಮಿಕ ಚಿಕಿತ್ಸೆಯ ನಂತರ ಬಿಡುಗಡೆ ಮಾಡಲಾಗಿದೆ.
ತೀವ್ರವಾದ ಶಾಖ ಮತ್ತು ವಿಷಾನಿಲದಿಂದ ತುಂಬಿದ್ದ ಗುಂಡಿಗೆ ಇಳಿಯಲು ಕಾರ್ಮಿಕರು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಜ್ಯೂವೆಲರಿ ಮಾಲೀಕರು ಹೆಚ್ಚು ಹಣ ನೀಡುವ ಆಮೀಷವೊಡ್ಡಿ ಕಾರ್ಮಿಕರನ್ನು ಕೆಳಗೆ ಇಳಿಸಿದ್ದರು ಎಂದು ತಿಳಿದು ಬಂದಿದೆ.
ಆರಂಭದಲ್ಲಿ ಅಮಿತ್ ಮತ್ತು ರೋಹಿತ್ ಎಂಬುವವರು ಗುಂಡಿಗೆ ಇಳಿದಿದ್ದಾರೆ. ಗುಂಡಿಗೆ ಇಳಿದ ಕೆಲವೇ ಕ್ಷಣಗಳಲ್ಲಿ ಉಸಿರಾಟದ ಸಮಸ್ಯೆ ಎದುರಿಸಿದ್ದಾರೆ. ಪ್ರಜ್ಞೆ ತಪ್ಪುವಂತೆ ಆದಾಗ ರಕ್ಷಣೆಗೆ ಜೋರಾಗಿ ಕೂಗಿದ್ದಾರೆ. ಅವರನ್ನು ರಕ್ಷಿಸಲು ಸಂಜೀವ್, ಹಿಮಾಂಶು, ಅರ್ಪಿತ್, ಅಜಯ್, ರಾಂಪಾಲ್, ಮುಖೇಶ್ ಗುಂಡಿಗೆ ಇಳಿದಿದ್ದಾರೆ. ಆದರೆ ಕೂಡಲೇ ಅವರು ಕೂಡ ಪ್ರಜ್ಞೆ ತಪ್ಪಿದ್ದಾರೆ.
ಕೂಡಲೇ ಹೊರಗಿನಿಂದ ಇತರರನ್ನು ಕರೆತಂದು ಕಾರ್ಮಿಕರನ್ನು ರಕ್ಷಿಸಲು ಪ್ರಯತ್ನಿಸಲಾಯಿತು. 8 ಮಂದಿಯನ್ನು ಹೊರಗೆ ಎಳೆದು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ರೋಹಿತ್, ಅಮಿತ್, ಸಂಜಯ್ ಮತ್ತು ಹಿಮಾಂಶು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಕೆಮಿಕಲ್ ನಲ್ಲಿ ತೊಳೆಯಲು ಬಳಸುವಾದ ಚಿನ್ನ ಹಾಗೂ ಬೆಳ್ಳಿ ಗುಂಡಿಯ ಆಳ ಸೇರಿತ್ತು. ಈ ಹಿನ್ನೆಲೆಯಲ್ಲಿ ಗುತ್ತಿಗೆದಾರ ಬಳಿ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಕರೆಸಿ ಚಿನ್ನ ಮತ್ತು ಬೆಳ್ಳಿ ತೆಗೆಸಲು ಪ್ರಯತ್ನಿಸಿದಾಗ ಈ ದುರಂತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.