ಹುಣಸೂರು ತಾಲೂಕಿನ ಗೌಡನಕಟ್ಟೆಯಲ್ಲಿ ತಾಯಿಯೊಂದಿಗೆ ಇತ್ತೀಚೆಗೆ ಸೆರೆ ಸಿಕ್ಕಿದ್ದ ನಾಲ್ಕು ಹುಲಿ ಮರಿಗಳು ಮೃತಪಟ್ಟಿವೆ. ತಾಯಿ ಹುಲಿಯನ್ನು ಸೆರೆ ಹಿಡಿದ ಬಳಿಕ ಮರಿಗಳು ಆಹಾರವಿಲ್ಲದೆ ಹೆದರಿ ನಿತ್ರಾಣಗೊಂಡಿದ್ದವು. ಅವುಗಳಿಗೆ ಚಿಕಿತ್ಸೆ ನೀಡುತ್ತಿದ್ದರೂ ಪ್ರಾಣ ಕಳೆದುಕೊಂಡಿವೆ. ಮರಿಗಳ ಸಾವಿಗೆ ನಿಖರ ಕಾರಣ ತಿಳಿಯಲು ಪಶುವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ್ದು, ವರದಿ ಬಂದ ಬಳಿಕ ಕಾರಣ ತಿಳಿಯಲಿದೆ.
ಗೌಡನಕಟ್ಟೆ ಗ್ರಾಮದಲ್ಲಿ ನವೆಂಬರ್ 28ರಂದು ಈ ನಾಲ್ಕು ಮರಿಗಳ ಜೊತೆಗೆ ತಾಯಿ ಹುಲಿಯೂ ಕಾಣಿಸಿಕೊಂಡಿದ್ದು, ನ.29 ರಂದು ತಾಯಿಯೊಂದಿಗೆ 4 ಹುಲಿ ಮರಿಗಳು ಸೆರೆ ಸಿಕ್ಕಿದ್ದವು. ಗೌಡನಕಟ್ಟೆಯ ಪ್ರಕಾಶ್ ಅವರ ಜೋಳದ ಹೊಲದ ಬಳಿ ಕಾಣಿಸಿಕೊಂಡಿದ್ದ ಹುಲಿ ಮರಿಗಳನ್ನು ಸ್ಥಳೀಯರು ಮತ್ತು ಅರಣ್ಯ ಸಿಬ್ಬಂದಿ ಪತ್ತೆ ಮಾಡಿದ್ದರು. ಮೊದಲು ತಾಯಿ ಹುಲಿಯನ್ನು ಸೆರೆ ಹಿಡಿದು ಪುನರ್ವಸತಿ ಕೇಂದ್ರಕ್ಕೆ ರವಾನಿಸಲಾಗಿತ್ತು.
ತಾಯಿ ಹುಲಿ ಸೆರೆ ಸಿಕ್ಕಿದ ಬಳಿಕ ಎರಡು ದಿನ ತಾಯಿಯಿಂದ ದೂರವಿದ್ದ ಹುಲಿಮರಿಗಳು ಆಹಾರವಿಲ್ಲದೆ, ಜನರ ಕಿರುಚಾಟ ಮತ್ತು ಓಡಾಟದಿಂದ ಗಾಬರಿಯಾಗಿ ಅಸ್ವಸ್ಥಗೊಂಡಿದ್ದವು. ಅವುಗಳನ್ನು ಕೂಡ ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿ ಚಿಕಿತ್ಸೆ ನೀಡಲಾಗಿತ್ತು. ಕಳೆದ ನಾಲ್ಕು ದಿನಗಳಲ್ಲಿ ಒಂದಾದ ಮೇಲೆ ಒಂದು ಮೃತಪಟ್ಟಿವೆ. ತಾಯಿ ಹುಲಿ ಆರೋಗ್ಯವಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.


