Menu

ರಾಯಚೂರಿನಲ್ಲಿ ಮಳೆಗೆ ಪಕ್ಕದ ಮನೆಗೆ ವಾಲಿದ ನಾಲ್ಕಂತಸ್ತು ಕಟ್ಟಡ

ಮಳೆಯಿಂದಾಗಿ ರಾಯಚೂರು ನಗರದ ಕೋಟ್ ತಲಾರ್ ಬಡಾವಣೆಯ ಮೋತಿ ಮಸ್ಜಿದ್ ಬಳಿ ನಾಲ್ಕು ಅಂತಸ್ತಿನ ಕಟ್ಟಡವೊಂದು ಕುಸಿದು ಪಕ್ಕದ ಕಟ್ಟಡದ ಮೇಲೆ ವಾಲಿದೆ. ಯಾವುದೇ ಪ್ರಾಣಾಪಾಯ ಸಂಭವಿಸದಿದ್ದರೂ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.

ಕುಸಿದ ಕಟ್ಟಡವು ಸಿವಿಲ್ ಇಂಜಿನಿಯರ್ ಮೊಹಮ್ಮದ್ ದಸ್ತಗಿರ್ ಒಡೆತನದ ನಾಲ್ಕು ಅಂತಸ್ತಿನ ಕಟ್ಟಡವಾಗಿದೆ. ಈ ಕಟ್ಟಡವು ಸಿರಾಜ್ ಒಡೆತನದ ಮತ್ತೊಂದು ನಾಲ್ಕು ಅಂತಸ್ತಿನ ಕಟ್ಟಡದ ಮೇಲೆ ವಾಲಿದ್ದು, ಎರಡೂ ಕಟ್ಟಡಗಳಲ್ಲಿ ತಲಾ ಮೂರು ಕುಟುಂಬಗಳು ವಾಸವಾಗಿವೆ. 14 ವರ್ಷಗಳ ಹಿಂದೆ ನಿರ್ಮಾಣವಾದ ಈ ಕಟ್ಟಡವು ಭಾರಿ ಮಳೆಯಿಂದಾಗಿ ದುರ್ಬಲಗೊಂಡು ಹೀಗೆ ವಾಲಿದೆ ಎನ್ನಲಾಗಿದೆ.

ಕಟ್ಟಡವು ಸಣ್ಣ ಜಾಗದಲ್ಲಿ ನಿರ್ಮಾಣವಾಗಿದ್ದು, ರಸ್ತೆಯ ಪಕ್ಕದಲ್ಲಿಯೇ ಇರುವುದರಿಂದ ಸಾರ್ವಜನಿಕರಿಗೆ ಮತ್ತು ಪಕ್ಕದ ಕಟ್ಟಡದ ನಿವಾಸಿಗಳಿಗೂ ಆತಂಕ ಎದುರಾಗಿದೆ. ಕಟ್ಟಡದ ನಿವಾಸಿಗಳು ತಕ್ಷಣವೇ ಸ್ಥಳಾಂತರಗೊಂಡಿದ್ದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ.

ರಾಯಚೂರು ಮಹಾನಗರ ಪಾಲಿಕೆ ಮತ್ತು ಪೊಲೀಸ್ ಇಲಾಖೆಯು ವಾಲಿರುವ ಕಟ್ಟಡದಲ್ಲಿದ್ದ ಮೂರು ಕುಟುಂಬಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದೆ. ಸಿರಾಜ್ ಒಡೆತನದ ಕಟ್ಟಡದ ನಿವಾಸಿಗಳಿಗೆ ಎಚ್ಚರಿಕೆಯಿಂದಿರಲು ಸೂಚನೆ ನೀಡಲಾಗಿದೆ. ಘಟನೆಯ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಕಟ್ಟಡದ ಸ್ಥಿತಿಯನ್ನು ಪರಿಶೀಲಿಸಿದ್ದು, ಮುಂದಿನ ಕ್ರಮಕ್ಕಾಗಿ ತಾಂತ್ರಿಕ ತಂಡವನ್ನು ರಚಿಸಲಾಗಿದೆ.

Related Posts

Leave a Reply

Your email address will not be published. Required fields are marked *