ಬೆಂಗಳೂರಿನಲ್ಲಿ ಹಾಡುಹಗಲೇ 7.11 ಕೋಟಿ ರೂ. ದರೋಡೆ ಮಾಡಿದ ಪ್ರಕರಣವನ್ನು ಕೆಲವೇ ದಿನಗಳಲ್ಲಿ ಭೇದಿಸಿರುವ ಬೆಂಗಳೂರು ಪೊಲೀಸರು ಇಬ್ಬರು ಮಾಸ್ಟರ್ ಮೈಂಡ್ ಸೇರಿದಂತೆ ನಾಲ್ವರನ್ನು ಬಂಧಿಸಿದ್ದು, 5.30 ಕೋಟಿ ರೂ. ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ಡೇರ್ ಸರ್ಕಲ್ ಬಳಿ ಆರ್ ಬಿಐ ಅಧಿಕಾರಿಗಳ ಸೋಗಿನಲ್ಲಿ ಎಟಿಎಂಗೆ ಹಣ ತುಂಬಿಸುವ ವಾಹನ ಅಡ್ಡಗಟ್ಟಿ 7.11 ಕೋಟಿ ಹಣ ದರೋಡೆ ಮಾಡಿದ್ದ ಆರೋಪಿಗಳನ್ನು ಚೆನ್ನೈನಲ್ಲಿ ಬಂಧಿಸಲಾಗಿದೆ.
ಆಂಧ್ರಪ್ರದೇಶದ ಚಿತ್ತೂರಿನಲ್ಲಿ ದರೋಡೆಗೆ ಬಳಸಿದ್ದ ಇನ್ನೋವಾ ಕಾರು ವಶಕ್ಕೆ ಪಡೆದ ಬೆನ್ನಲ್ಲೇ ಪೊಲೀಸರು ಗೋವಿಂದಪುರ ಠಾಣೆಯ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯ್ಕ್, ಸಿಎಂಎಸ್ ಮಾಜಿ ಉದ್ಯೋಗಿ ಹಾಗೂ ಕೇರಳ ಮೂಲದ ದೇವಿಯರ್ ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆದಿದ್ದು, 5.30 ಕೋಟಿ ರೂ. ವಶಕ್ಕೆ ಪಡೆದಿದ್ದಾರೆ. ಉಳಿದ ಹಣದ ಶೋಧ ಕಾರ್ಯ ಮುಂದುವರಿದಿದೆ.
ದರೋಡೆಕೋರರಿಗೆ ಇನ್ನೋವಾ ಕಾರು ಕೊಟ್ಟಿದ್ದ ಇಬ್ಬರನ್ನ ಪೊಲೀಸರು ಬಂಧಿಸಿದ್ದಾರೆ. ಚಿತ್ತೂರು ಗುಡಿಪಲ್ಲಿ ಬಳಿ ಪತ್ತೆಯಾಗಿದ್ದ ಕಾರು ಎಂಜಿನ್‌ನ ಚಾರ್ಸಿ ನಂಬರ್ ಆಧರಿಸಿ ಇಬ್ಬರನ್ನ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಕರಣ ದಾಖಲಿಸಿಕೊಂಡು ವಿಶೇಷ ತಂಡಗಳನ್ನು ರಚಿಸಿದ್ದ ಪೊಲೀಸರು, ಗೋವಿಂದಪುರ ಠಾಣೆಯ ಕಾನ್‌ಸ್ಟೇಬಲ್ ಅಣ್ಣಪ್ಪನಾಯ್ಕ್, ಕೇರಳ ಮೂಲದ ಜೇವಿಯರ್ ಇಬ್ಬರನ್ನು ಬಂಧಿಸಿದ್ದಾರೆ. ಬುಧವಾರ ರಾತ್ರಿಪಾಳಿಯಲ್ಲಿಯೇ ಇದ್ದ ಅಣ್ಣಪ್ಪನಾಯ್ಕ್ ಗುರುವಾರ ಬೆಳಗ್ಗೆ ಕೆಲಸ ಮುಗಿಸಿ ಮನೆಗೆ ಹೋಗುವಾಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದರೋಡೆ ಗ್ಯಾಂಗ್ ಹಿಂದೆ ಇದ್ದಿದ್ದು ಪೊಲೀಸ್ ಕಾನ್ಸ್‌ಟೇಬಲ್ ಮಾತ್ರವಲ್ಲ ಬದಲಾಗಿ ಸಿಎಂಎಸ್ ಮಾಜಿ ಉದ್ಯೋಗಿಯೂ ಕೃತ್ಯಕ್ಕೆ ಸಾಥ್ ನೀಡಿದ್ದ ಎಂಬ ವಿಚಾರ ಪೊಲೀಸರ ತನಿಖೆ ವೇಳೆ ಬಯಲಾಗಿದೆ. ಹೀಗಾಗಿ ಸಿಎಂಎಸ್ನಲ್ಲಿ ಈ ಹಿಂದೆ ಕೆಲಸಮಾಡಿದ್ದ ಜೇವಿಯರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಈತ ಒಂದು ವರ್ಷದ ಹಿಂದೆ ಸಿಎಂಎಸ್ನಿಂದ ಕೆಲಸ ಬಿಟ್ಟಿದ್ದ ಎಂಬುದು ಗೊತ್ತಾಗಿದೆ. ಇತ್ತ ಬಾಣಸವಾಡಿಯಲ್ಲಿ ಕ್ರೈಂ ಬೀಟ್ ಮಾಡುತ್ತಿದ್ದ ಪೊಲೀಸ್ ಕಾನ್ಸ್‌ಟೇಬಲ್ ಅಣ್ಣಪ್ಪನನ್ನು ಹೊಯ್ಸಳಕ್ಕೆ ವರ್ಗಾಯಿಸಲಾಗಿತ್ತು. ಮಾಡಲು ಕೆಲಸವಿಲ್ಲದೆ ಅಣ್ಣಪ್ಪ ಮತ್ತು ಝೇವಿಯರ್ ಇಬ್ಬರೂ ಪ್ರತಿದಿನ ಮೀಟಿಂಗ್ ಮಾಡುತ್ತಿದ್ದರು. ಈ ವೇಳೆ ಸಿಎಂಎಎಸ್ನ ಹಣ ರವಾನೆಯ ಎಲ್ಲಾ ವಿಚಾರವನ್ನ ಅಣ್ಣಪ್ಪ ಬಳಿ ಝೇವಿಯರ್ ಹೇಳಿಕೊಂಡಿದ್ದ. ಹಣ ದರೋಡೆಗೆ ಆರೋಪಿಗಳು ಯೋಚಿಸಿದ್ದು, ಸಿಎಂಎಸ್ ಪ್ಲ್ಯಾನ್ ನಂದು, ಎಸ್ಕೇಪ್ ಪ್ಲ್ಯಾನ್ ನಿಂದು ಎಂದು ಝೇವಿಯರ್ ಅಣ್ಣಪ್ಪಗೆ ತಿಳಿಸಿದ್ದ ಎನ್ನಲಾಗಿದೆ.


