ಉತ್ತರ ಪ್ರದೇಶದ ಕುಂಭಮೇಳದಲ್ಲಿ ಪಾಲ್ಗೊಂಡು ಹಿಂತಿರುಗುತ್ತಿದ್ದಾಗ ಮಧ್ಯಪ್ರದೇಶದ ಇಂದೋರ್ ನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಬೆಳಗಾವಿಯ ನಾಲ್ವರು ಸೇರಿದಂತೆ 6 ಮಂದಿ ಮೃತಪಟ್ಟಿದ್ದಾರೆ.
ಮಧ್ಯಪ್ರದೇಶದ ಇಂದೋರ್ ನಲ್ಲಿ ಶುಕ್ರವಾರ ಬೆಳಗ್ಗೆ ದ್ವಿಚಕ್ರ ವಾಹನ, ಖಾಸಗಿ ಮಿನಿ ಬಸ್ ಮತ್ತು ಟ್ರೇಲರ್ ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ೬ ಮಂದಿ ಮೃತಪಟ್ಟಿದ್ದು, 16 ಮಂದಿ ಗಾಯಗೊಂಡಿದ್ದಾರೆ.
ಮ್ಹೌ ತಹಸಿಲ್‌ನ ಮಾನ್ಪುರ್ ಪ್ರದೇಶದಲ್ಲಿ ಬೈಕ್ ಮತ್ತು ಮಿನಿ ಬಸ್ ಇಳಿಜಾರಿನಲ್ಲಿ ಚಲಿಸುತ್ತಿದ್ದ ಟ್ರೇಲರ್ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದ ೧೯ ಪ್ರಯಾಣಿಕರಿದ್ದ ಮಿನಿಬಸ್ ನಲ್ಲಿದ್ದ ನಾಲ್ವರು ಹಾಗೂ ಬೈಕ್ ನಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ.
ಗಾಯಗೊಂಡ 16 ಮಂದಿಯನ್ನು ಸರ್ಕಾರಿ ಸ್ವಾಮ್ಯದ ಮಹಾರಾಜ ಯಶ್ವಂತರಾವ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ(ಇಂದೋರ್ ಗ್ರಾಮೀಣ) ರೂಪೇಶ್ ದ್ವಿವೇದಿ ಪಿಟಿಐಗೆ ತಿಳಿಸಿದ್ದಾರೆ.
ಕುಂಭಮೇಳದಲ್ಲಿ ಪಾಲ್ಗೊಂಡ ನಂತರ ಉಜ್ಜಯಿನಿಯ ಪ್ರಸಿದ್ಧ ಮಹಾಕಾಳ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಮಿನಿ ಬಸ್‌ನಲ್ಲಿದ್ದ ಪ್ರಯಾಣಿಕರು ಕರ್ನಾಟಕದ ಬೆಳಗಾವಿಗೆ ಹಿಂತಿರುಗುತ್ತಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.