Menu

ಶಿವಮೊಗ್ಗ ಭದ್ರಾ ನಾಲೆಯಲ್ಲಿ ತಾಯಿ, ಮಗ, ಮಗಳು, ಅಳಿಯ ನೀರುಪಾಲು

ಶಿವಮೊಗ್ಗದ ಹೊಳೆಹೊನ್ನೂರು ಸಮೀಪದ ಅರಬಿಳಚಿ ಗ್ರಾಮದಲ್ಲಿ ಬಟ್ಟೆ ತೊಳೆಯಲೆಂದು ಭದ್ರಾ ನಾಲೆಗೆ ತೆರಳಿದ್ದ ಒಂದೇ ಕುಟುಂಬದ ನಾಲ್ವರು ಕಾಲು ಜಾರಿ ನೀರುಪಾಲಾಗಿದ್ದಾರೆ. ತಾಯಿ ಮತ್ತು ಮಗಳು ಮೊದಲು ನಾಲೆಗೆ ಬಿದ್ದಿದ್ದು, ಅವರನ್ನು ರಕ್ಷಿಸಲು ಹೋದ ಮಗ ಮತ್ತು ಅಳಿಯ ಕೂಡ ನೀರಿನಲ್ಲಿ ಮುಳುಗಿದ್ದಾರೆ.

ಅರೆಬಳಚಿ ಗ್ರಾಮದ ನೀಲಾಬಾಯಿ (50), ಮಗ ರವಿಕುಮಾರ್ (23), ಮಗಳು ಶ್ವೇತಾ (24) ಮತ್ತು ಅಳಿಯ ಪರಶುರಾಮ (28) ನೀರು ಪಾಲಾದವರು. ಈವರೆಗೂ ಶವ ಪತ್ತೆಯಾಗಿಲ್ಲ. ನಾಪತ್ತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಲ್ವರ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

ನಾಲ್ವರು ಕೂಡ ಭಾನುವಾರ ಮಧ್ಯಾಹ್ನ ಎರಡು ಬೈಕ್‌ಗಳಲ್ಲಿ ಬಟ್ಟೆ ತೊಳೆಯಲು ಭದ್ರಾ ನಾಲೆಯತತ ತೆರಳಿದ್ದರು. ತಾಯಿ ನೀಲಾಬಾಯಿ ಮತ್ತು ಮಗಳು ಶ್ವೇತಾ ಬಟ್ಟೆ ಒಗೆಯುವಾಗ ತಾಯಿ, ಮಗಳು ಕಾಲು ಜಾರಿ ನಾಲೆಗೆ ಬಿದ್ದಿದ್ದಾರೆ. ಅವರನ್ನು ರಕ್ಷಿಸಲು ಮಗ ರವಿಕುಮಾರ್‌ ಮತ್ತು ಅಳಿಯ ಪರಶುರಾಮ್‌ ನಾಲೆಗೆ ಇಳಿದಿದ್ದಾರೆ. ನಾಲ್ವರು ಕೂಡ ನೀರಿನಿಂದ ಮೇಲೆ ಬರಲಾಗದೆ ಮುಳುಗಿದ್ದಾರೆ.

ಅರಬಿಳಚಿ ಗ್ರಾಮದ ನೀಲಾಬಾಯಿ ಮಗಳಾದ ಶ್ವೇತಾ ಅವರನ್ನು ಶಿಕಾರಿಪುರ ತಾಲೂಕಿನ ಬೆಂಡೆಕಟ್ಟೆ ಗ್ರಾಮದ ಪರಶುರಾಮ ಎಂಬವರಿಗೆ ಮದುವೆ ಮಾಡಿಕೊಡಲಾಗಿತ್ತು. ಅರಬಿಳಚಿ ಗ್ರಾಮದಲ್ಲಿ ಜ.12 ರಿಂದ 16ರವರೆಗೆ ಮಾರಿಕಾಂಬ ಜಾತ್ರೆ ನಡೆದಿದ್ದು, ಶ್ವೇತಾ ತಮ್ಮ ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ತವರಿಗೆ ಆಗಮಿಸಿದ್ದರು. ಮನೆಗೆ ಹೆಚ್ಚು ಜನ ನೆಂಟರು ಆಗಮಿಸಿದ್ದರಿಂದ ಬಟ್ಟೆ ತೊಳೆಯಲೆಂದು ನಾಲೆಗೆ ಬಂದಿದ್ದರು.

ನಾಲೆಯ ದಡದಲ್ಲಿ ಬಟ್ಟೆ ಹಾಗೂ ಎರಡು ಬೈಕ್ ನೋಡಿದ ಸ್ಥಳೀಯರು ಸ್ಥಳದಲ್ಲಿ ಯಾರೂ ಇಲ್ಲದ್ದರಿಂದ ಅನುಮಾನಗೊಂಡು ಪಟ್ಟಣದ ಠಾಣೆಗೆ ಮಾಹಿತಿ ನೀಡಿದ್ದಾರೆ. ಬೈಕ್‌ ಸಂಖ್ಯೆ ಆಧಾರದಲ್ಲಿ ಸಂಪರ್ಕಿಸಿದಾಗ ನಾಲೆಗೆ ಬಂದವರ ಮಾಹಿತಿ ದೊರಕಿದೆ. ಡಿವೈಎಸ್ಪಿ ಕಾರ್ಯಪ್ಪನವರ ನೇತೃತ್ವದಲ್ಲಿ ಪಿಐ ಶಿವಪ್ರಸಾದ್, ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದಿಂದ ಶೋಧ ಕಾರ್ಯ ಕೈಗೊಂಡಿದ್ದಾರೆ.

Related Posts

Leave a Reply

Your email address will not be published. Required fields are marked *