ಭಾಲ್ಕಿ ತಾಲೂಕಿನ ಮರೂರು ಬಳಿ ಕಾಲುವೆಗೆ ಜಿಗಿದು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾಲ್ವರು ಮಕ್ಕಳ ಜೊತೆ ದಂಪತಿ ಸೇರಿ ಒಟ್ಟು 6 ಜನರು ಕಾರಂಜಾ ಜಲಾಶಯದ ಎಡದಂಡೆ ಕಾಲುವೆಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದು, ನಾಲ್ವರು ಮೃತಪಟ್ಟಿದ್ದರೆ ಇಬ್ಬರನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಬೀದರ್ ಮೈಲೂರಿನ ಶಿವಮೂರ್ತಿ(45), ಶ್ರೀಕಾಂತ್(8), ಹೃತಿಕ್(4), 7 ತಿಂಗಳ ಮಗು ರಾಕೇಶ್ ಮೃತಪಟ್ಟವರು. ರಮಾಬಾಯಿ(42) ಹಾಗೂ ಪುತ್ರ ಶ್ರೀಕಾಂತ್(7) ಅವರನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಮೈಲೂರಿನಲ್ಲಿ ವಾಸ ಮಾಡುತ್ತಿದ್ದ ಕುಟುಂಬ ಸಾಲಬಾಧೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗಿದೆ. ಘಟನಾ ಸ್ಥಳಕ್ಕೆ ಧನ್ನೂರು ಪೊಲೀಸರು ಹಾಗೂ ಸಚಿವ ಈಶ್ವರ್ ಖಂಡ್ರೆ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಚಿಂತಾಮಣಿಯಲ್ಲಿ ವ್ಯಾಪಾರಿಗಳ ಜಗಳ: ಒಬ್ಬನ ಕೊಲೆ
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ. ಅರ್ಬಾಜ್ ಮತ್ತು ಫರ್ಹಾದ್ ಚಿಂತಾಮಣಿ ನಗರದ ಎಂಜಿ ರಸ್ತೆಯಲ್ಲಿರುವ ಸರ್ಕಾರಿ ಆಸ್ಪತ್ರೆ ಎದುರು ಹಣ್ಣಿನ ವ್ಯಾಪಾರ ಮಾಡುತ್ತಿದ್ದರು.
ಎಂದಿನಂತೆ ಮಾತನಾಡುತ್ತಿದ್ದ ಇಬ್ಬರೂ ಗಲಾಟೆ ಮಾಡಿಕೊಂಡು ಫರ್ಹಾದ್ ಏಕಾಏಕಿ ಅರ್ಬಾಜ್ ಮೇಲೆ ಕತ್ತರಿಯಿಂದ ಇರಿದಿದ್ದಾನೆ. ರಕ್ತಸ್ರಾವವಾಗಿ ಅಲ್ಲೇ ಕುಸಿದು ಬಿದ್ದಿದ್ದ ಅರ್ಬಾಜ್‌ನನ್ನ ಎದುರಲ್ಲೇ ಇರುವ ಆಸ್ಪತ್ರೆಗೆ ಸೇರಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಕೋಲಾರದ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮೃತಪಟ್ಟಿದ್ದಾನೆ. ಚಿಂತಾಮಣಿ ನಗರ ಪೊಲೀಸರು ಆರೋಪಿ ಫರ್ಹಾದ್‌ನನ್ನು ಬಂಧಿಸಿದ್ದಾರೆ.