ರಾಜಸ್ಥಾನದ ಬಾರ್ಮರ್ ನಗರದಲ್ಲಿ ಗಂಡು ಮಗುವಿಗೆ ಹೆಣ್ಣಿನಂತೆ ಎಲ್ಲ ಬಗೆಯ ಅಲಂಕಾರ ಮಾಡಿ, ತಾಯಿಯ ಚಿನ್ನದ ಒಡವೆಗಳನ್ನು ತೊಡಿಸಿ ಸಂಭ್ರಮಿಸಿದ ನಂತರ ಒಂದೇ ಕುಟುಂಬದ ನಾಲ್ವರು ವಾಟರ್ ಟ್ಯಾಂಕ್ ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶಿವಲಾಲ್ ಮೇಘವಾಲ್ (35), ಪತ್ನಿ ಕವಿತಾ (32), ಮಕ್ಕಳಾದ ಭಜರಂಗ್ (9) ಮತ್ತು ರಾಮ್ ದೇವ್ (8) ಮನೆಯ ವಾಟರ್ ಟ್ಯಾಂಕ್ ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೆಣ್ಣಿನ ವೇಷ ಹಾಕಿ ಮನೆ ಮಂದಿಯನ್ನು ಸಂತೋಷಪಡಿಸಿದ್ದ ಮಗ ರಾಮ್ ದೇವ್ ಕೂಡ ಮೃತಪಟ್ಟಿದ್ದಾನೆ.
ಸ್ಥಳಕ್ಕೆ ಪೊಲೀಸರು ಆಗಮಿಸಿ ಮನೆಯಿಂದ 20 ಮೀಟರ್ ದೂರದಲ್ಲಿರುವ ವಾಟರ್ ಟ್ಯಾಂಕ್ ನಲ್ಲಿ ಶವಗಳನ್ನು ಪತ್ತೆಹಚ್ಚಿದ್ದು, ಮಕ್ಕಳನ್ನು ಕೊಂದು ಹೆತ್ತವರು ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ ಎಂಬ ಬಗ್ಗೆ ತನಿಖೆ ನಡೆಸಿದ್ದಾರೆ.ಮಂಗಳವಾರ ಬೆಳಿಗ್ಗೆ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದ್ದು, ಸಂಜೆ ನೀರು ಬ್ಲಾಕ್ ಆಗಿದ್ದರಿಂದ ಸಂಬಂಧಿಕರು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸರಿಗೆ ದೂರು ನೀಡಿದರೂ ಪೊಲೀಸರು ಬುಧವಾರ ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಮನೆಯಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ನಮ್ಮೆಲ್ಲರ ಸಾವಿಗೆ ನಾನೇ ಕಾರಣ ಎಂದು ಬರೆಯಲಾಗಿದೆ. ಮನೆಯ ಒಡೆತನ ವಿಷಯದಲ್ಲಿ ಶಿವಲಾಲ್ ಮತ್ತು ಸೋದರರ ನಡುವೆ ಮನಸ್ತಾಪ ಇತ್ತು. ಶಿವಲಾಲ್ ಕೇಂದ್ರ ಸರ್ಕಾರದ ಪ್ರಧಾನಿ ಇಂದಿರಾ ಆವಾಸ್ ಯೋಜನೆಯಡಿ ಮನೆ ನಿರ್ಮಿಸಲು ಮುಂದಾಗಿದ್ದು, ಇದು ಸೋದರರ ಅಸಮಾಧಾನಕ್ಕೆ ಕಾರಣವಾಗಿ ಮನೆ ಕಟ್ಟಲು ಬಿಟ್ಟಿರಲಿಲ್ಲ. ಇದರಿಂದ ಅಸಮಾಧಾನಗೊಂಡಿದ್ದ ಶಿವಲಾಲ್ ಕುಟುಂಬದ ಸಮೇತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.