Menu

ಶಬರಿಮಲೆಯಿಂದ ವಾಪಸಾಗುತ್ತಿದ್ದ ಕೊಪ್ಪಳದ ಮಾಲಾಧಾರಿಗಳು ತುಮಕೂರಿನಲ್ಲಿ ರಸ್ತೆ ಅಪಘಾತಕ್ಕೆ ಬಲಿ

ತುಮಕೂರು ಕೋರಾ ಸಮೀಪ ವಸಂತನರಸಾಪುರ ಕೈಗಾರಿಕಾ ಪ್ರದೇಶದ ಬಳಿ ರಸ್ತೆ ಅಪಘಾತ ಸಂಭವಿಸಿದ್ದು, ನಾಲ್ವರು ಅಯ್ಯಪ್ಪ ಭಕ್ತರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಿಂತಿದ್ದ ಲಾರಿಗೆ ಕ್ರೂಸರ್ ವಾಹನ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ.

ಕ್ರೂಸರ್‌ನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಅಯ್ಯಪ್ಪ ಭಕ್ತರು ಮೃತಪಟ್ಟಿದ್ದು, ಒಬ್ಬ ಬಾಲಕಿ ಸೇರಿದ್ದಾಳೆ. ಅಪಘಾತದಲ್ಲಿ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರನ್ನು ಯಲಬುರ್ಗಾ ನಿವಾಸಿಗಳು ಎಂದು ಗುರುತಿಸಲಾಗಿದೆ. ಸಾಕ್ಷಿ (7), ವೆಂಕಟೇಶಪ್ಪ (30), ಮಾರತಪ್ಪ (35) ಹಾಗೂ ಗವಿಸಿದ್ದಪ್ಪ (40) ಮೃತಪಟ್ಟವರು.

ಶಬರಿಮಲೆ ಅಯ್ಯಪ್ಪ ದರ್ಶನ ಮುಗಿಸಿಕೊಂಡು ವಾಪಸ್ ಆಗುತ್ತಿದ್ದಾಗ ಈ ದುರಂತ ನಡೆದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಪಘಾತದಲ್ಲಿ ಮೃತಪಟ್ಟಿರುವ ಸಾಕ್ಷಿ ನನ್ನ ಮಗಳು. ಶಬರಿಮಲೆಗೆ ತೆರಳಿದ್ದೆವು. ದೇವರ ದರ್ಶನ ಮಾಡಿಕೊಂಡು ವಾಪಾಸ್ ಆಗುವಾಗ ಮಗಳು ನನ್ನ ಪಕ್ಕದಲ್ಲೇ ಮಲಗಿದ್ದಳು. ಅಪಘಾತ ಹೇಗಾಯಿತು ಎಂದು ಗೊತ್ತಿಲ್ಲ. ಕಾರು ಚಾಲಕ ಸೇರಿ ನಾವು 11 ಜನ ಪ್ರಯಾಣ ಮಾಡುತಿದ್ದೆವು. ನನ್ನ ಮಗಳು ಒಂದನೇ ತರಗತಿ ಓದುತಿದ್ದಳು. ಎರಡನೇ ಬಾರಿ ಶಬರಿ ಮಾಲೆಗೆ ಕರೆದೊಯ್ದಿದ್ದೆ. ಒಳ್ಳೆಯದಾಗಲಿ ಎಂದು ದೇವರ ದರ್ಶನ ಮಾಡಿ ವಾಪಾಸ್ ಬರುವಾಗ ಹೀಗಾಗಿದೆ ಎಂದು ಉಲಗಪ್ಪ ಕಣ್ಣೀರು ಹಾಕಿದ್ದಾರೆ.

ಶಬರಿಮಲೆಯಲ್ಲಿ ಅಯ್ಯಪ್ಪ ದರ್ಶನ ಪಡೆದಿದ್ದ ಮಾಲಾಧಾರಿಗಳು ತಮಿಳುನಾಡಿನ ಪಳನಿ ದೇವಸ್ಥಾನಕ್ಕೆ ತೆರಳಿದ್ದರು. ಮಧ್ಯಾಹ್ನ ಪಳನಿಯಿಂದ ಬೆಂಗಳೂರು ತುಮಕೂರು ಮಾರ್ಗವಾಗಿ ಕೊಪ್ಪಳಕ್ಕೆ ತೆರಳುವಾಗ ಅಪಘಾತ ಸಂಭವಿಸಿದೆ.

Related Posts

Leave a Reply

Your email address will not be published. Required fields are marked *