ಹೊಸಕೋಟೆ ತಾಲೂಕಿನ ಗೊಣಕನಹಳ್ಳಿ ಗ್ರಾಮದಲ್ಲಿ ಮಹಿಳೆಯೊಬ್ಬರು ಗಂಡ ಮತ್ತು ಇಬ್ಬರು ಮಕ್ಕಳನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆಗೆ ಯತ್ನಿಸಿ ಸಾವಿನಿಂದ ಪಾರಾಗಿ ಆಸ್ಪತ್ರೆ ಸೇರಿರುವ ಘಟನೆ ನಡೆದಿದೆ.
ಗಂಡ ಶಿವು (32) ಮಗಳು ಚಂದ್ರಕಲಾ (11) ಮಗ ಉದಯ್ ಸೂರ್ಯ (7) ಮೃತರು. ಮಂಜುಳಾ ಪ್ರಾಣಾಪಾಯದಿಂದ ಪಾರಾದವರು. ಗಂಡ ಅಪಘಾತದಲ್ಲಿ ಗಾಯಗೊಂಡಿದ್ದ ಕಾರಣ ಚಿಕಿತ್ಸೆಗಾಗಿ ಕುಟುಂಬ ಸಾಲ ಮಾಡಿಕೊಂಡಿತ್ತು. ಸಾಲಬಾಧೆ ತಾಳಲಾರದೆ ದಂಪತಿ ಆತ್ಮಹತ್ಯೆಗೆ ನಿರ್ಧರಿಸಿದ್ದು, ನಾವು ಸತ್ತರೆ ಮಕ್ಕಳು ತಬ್ಬಲಿಗಳಾಗುತ್ತಾರೆ ಎಂದು ಮಕ್ಕಳನ್ನು ಕೂಡ ಸಾಯಿಸುವ ನಿರ್ಧಾರ ಮಾಡಿದ್ದರು.
ಮೊದಲಿಗೆ ಗಂಡ ಮತ್ತು ಮಕ್ಕಳ ಕುತ್ತಿಗೆಯನ್ನು ವೇಲ್‌ನಿಂದ ಬಿಗಿದು ಕೊಲೆ ಮಾಡಿದ ಪತ್ನಿ ಹಗ್ಗದಿಂದ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಹಗ್ಗ ತುಂಡಾದ ಕಾರಣ ಆಕೆ ಬದುಕುಳಿದಿದ್ದಾರೆ. ಆಕೆಗೆ ಹೊಸಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹಲ್ಲೆಗೊಳಗಾಗಿದ್ದ ಯುವಕ ಮನೆಯಲ್ಲಿ ಸಾವು
ಅರೆಕೆರೆಯಲ್ಲಿ ಕಟ್ಟಡ ನಿರ್ಮಾಣ ಕೆಲಸಕ್ಕೆ ಬಂದಿದ್ದ ಬಿಹಾರದ ಬೆಗುಸರಾಯ್ ಮೂಲದ ಯುವಕನೊಬ್ಬ ಹಲ್ಲೆಗೊಳಗಾಗಿ ಮೂರು ದಿನಗಳ ನಂತರ ಮನೆಯಲ್ಲೇ ಮೃತಪಟ್ಟಿದ್ದಾನೆ.
ಭೀಮಕುಮಾರ(25) ಮೃತ ಯುವಕ. ಆತನನ್ನು ಮಾತನಾಡಿಸಲು ಧೀರಜ್ ಮತ್ತು ಅರವಿಂದ್ ಕುಮಾರ್ ಎನ್ನುವ ಸ್ನೇಹಿತರು ಬಂದಿದ್ದರು. ಅವರನ್ನು ಬಿಡಲು ಬಿಡಲು ಹೋಗಿದ್ದ ಭೀಮಕುಮಾರ್ ಮತ್ತು ಅಂಜನ್ ರ್ಯಾಪಿಡೋ ಬುಕ್ ಮಾಡಿ ಪಾನಿಪುರಿ ಅಂಗಡಿ ಬಳಿ ನಿಂತಿದ್ದರು.
ಈ ವೇಳೆ ಪಾನಿಪುರಿ ತಿನ್ನುತ್ತಿದ್ದ ಸಲ್ಮಾನ್ ಎಂಬಾತ ಕೆಟ್ಟದಾಗಿ ಬೈದು ಇಲ್ಲಿಂದ ಹೋಗಿ ಎಂದಿದ್ದ. ಇದನ್ನು ಪ್ರಶ್ನಿಸಿದ್ದಕ್ಕೆ ಭೀಮಕುಮಾರ್ ಮತ್ತು ಸಲ್ಮಾನ್ ನಡುವೆ ಗಲಾಟೆಯಾಗಿದೆ. .
ಭೀಮಕುಮಾರ್ ಮತ್ತು ಸ್ನೇಹಿತರು ವಾಪಸ್ ಹೊರಟಾಗ ಹಿಂದಿನಿಂದ ಬಂದಿದ್ದ ಸಲ್ಮಾನ್ ಭೀಮಕುಮಾರ್ ಕುತ್ತಿಗೆಗೆ ಮುಷ್ಠಿಯಿಂದ ಗುದ್ದಿದ್ದ. ಭೀಮಕುಮಾರ್ ಪರಜ್ಞೆ ತಪ್ಪಿ ಬಿದ್ದಿದ್ದು, ಸ್ನೇಹಿತರು ಪ್ರಜ್ಞೆ ಬಂದ ಬಳಿಕ ಮನೆಗೆ ಕರೆದೊಯ್ದು ಮಲಗಿಸಿದ್ದರು. ಮೂರು ದಿನ ಅರೆಪ್ರಜ್ಞಾವಸ್ಥೆಯಲ್ಲಿದ್ದ ಭೀಮಕುಮಾರ್ ಮೃತಪಟ್ಟ ಬಳಿಕ ಸ್ನೇಹಿತ ಅಂಜನ್ ಮೈಕೋ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.
ಕೃತ್ಯ ನಡೆದ ಸ್ಥಳದ ಆಧಾರದಲ್ಲಿ ಪುಟ್ಟೇನಹಳ್ಳಿ ಠಾಣೆಗೆ ಪ್ರಕರಣ ವರ್ಗಾವಣೆಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.