ಭೀಮಾ ತೀರದ ಹಂತಕ ಬಾಗಪ್ಪ ಹರಿಜನ ಕೊಲೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ವಿಜಯಪುರ ಪೊಲೀಸರು ಬಂಧಿಸಿದ್ದಾರೆ. ಕೊಲೆ ಬಳಿಕ ಬಾಗಪ್ಪ ಹರಿಜನ ಮಗಳು ಇಂಡಿ ತಾಲೂಕಿನ ಬಬಲಾದಿ ಗ್ರಾಮದ ಗಂಗೂಬಾಯಿ ಬಾಗಪ್ಪ ಹರಿಜನ ದೂರು ನೀಡಿದ್ದರು.
ವಿಜಯಪುರ ನಗರ ಡಿವೈಎಸ್ಪಿ ಬಸವರಾಜ ಯಲಿಗಾರ ನೇತೃತ್ವದಲ್ಲಿ ಗಾಂಧಿಚೌಕ ಸಿಪಿಐ ಪ್ರದೀಪ ತಳಕೇರಿ, ಗೋಳಗುಮ್ಮಟ ಸಿಪಿಐ ಮಲ್ಲಯ್ಯ ಮಠಪತಿ ಮತ್ತು ಸಿಬ್ಬಂದಿಯನ್ನೊಳಗೊಂಡ ತಂಡ ರಚಿಸಲಾಗಿತ್ತು ಎಂದು ತಿಳಿಸಿದರು. ಈ ತಂಡ ಕಾರ್ಯಾಚರಣೆ ನಡೆಸಿ ಕೊಲೆ ಆರೋಪಕ್ಕೆ ಸಂಬಂಧಿಸಿದಂತೆ ಇಂಡಿ ತಾಲೂಕಿನ ಅಗರಖೇಡ ಗ್ರಾಮದ ಪ್ರಕಾಶ, ಇಂಡಿ ತಾಲೂಕಿನ ಹೊರ್ತಿ ಗ್ರಾಮದ ರಾಹುಲ ಭೀಮಾಶಂಕರ ತಳಕೇರಿ, ಅಗರಖೇಡ ಗ್ರಾಮದ ಸುದೀಪ ರೇಣುಕಾ ಕಾಂಬಳೆ, ಬೈಲಹೊಂಗಲ ಪಟ್ಟಣದ ಬಸವೇಶ್ವರ ಆಶ್ರಯ ಕಾಲನಿಯ ಮಣಿಕಂಠ ಎಂಬವರನ್ನು ಬಂಧಿಸಲಾಗಿದೆ.
ಆರೋಪಿಗಳು ಕೊಲೆಗೆ ಬಳಸಿದ ಆಯುಧ ಮತ್ತು ವಾಹನಗಳನ್ನು ಜಪ್ತಿ ಮಾಡಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಮಾಹಿತಿ ನೀಡಿದರು. ಬಾಗಪ್ಪ ಹರಿಜನ ಮತ್ತು ರವಿ ಮೇಲಿನಕೇರಿ ಸಂಬಂಧಿಕರಾಗಿದ್ದು, ಇವರಿಬ್ಬರ ನಡುವೆ ಕೆಲವು ವರ್ಷಗಳಿಂದ ಹಣಕಾಸು ವ್ಯವಹಾರವಿತ್ತು. ಕೆಲವು ತಿಂಗಳ ಹಿಂದೆ ವಿಜಯಪುರ ನಗರದಲ್ಲಿ ರವಿ ಮೇಲಿನಕೇರಿ ಎಂಬಾತನನ್ನು ತುಳಸಿರಾಮ ಹರಿಜನ ಮತ್ತು ಆತನ ಸಹಚರರಾದ ಅಲೇಕ್ಸ್ ಗೊಲ್ಲರ, ಶಣ್ಮುಖ ನಡುವಿನಕೇರಿ, ಪ್ರಕಾಶ ಗೊಲ್ಲರ, ಮುರುಗೇಶ ಉಳ್ಳಾಗಡ್ಡಿ, ರಾಜೇಸಾಬ ರುದ್ರವಾಡಿ ಕೊಲೆ ಮಾಡಿದ್ದರು. ಇವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದರು.
ರವಿ ಮೇಲಿನಕೇರಿ ಸಾವಿನ ನಂತರ ಭಾಗಪ್ಪ ಹರಿಜನ ರವಿ ಮೇಲಿನಕೇರಿ ತಮ್ಮ ಪ್ರಕಾಶ ಮೇಲಿನಕೇರಿಗೆ ಬೆದರಿಕೆ ಹಾಕಿದ್ದರು. ನಿಮ್ಮ ಅಣ್ಣ ನನ್ನ ಹೆಸರು ಹೇಳಿ ಹಣ, ಆಸ್ತಿ ಮತ್ತು ವಾಹನ ಎಲ್ಲವನ್ನೂ ಮಾಡಿಕೊಂಡಿದ್ದಾನೆ. ಅವೆಲ್ಲವನ್ನು ನನಗೆ ಬಿಟ್ಟು ಕೊಡಬೇಕು ಎಂದು ಬೆದರಿಕೆ ಕೂಡ ಹಾಕಿದ್ದ. ಇಲ್ಲದಿದ್ದರೆ ನಿನ್ನ ಅಣ್ಣನಂತೆ ನಿನ್ನ ಕೊಲೆಯಾಗುವುದು ಎಂದು ಹೆದರಿಸಿದ್ದ. ಹೀಗಾಗಿ ಅನ್ಣನ ಕೊಲೆ ಬಾಗಪ್ಪ ಹರಿಜನ ಮಾಡಿದ್ದೆಂದು ಪ್ರಕಾಶ ಮೇಲಿನಕೇರಿ ಖಚಿತಪಡಿಸಿಕೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾಗಪ್ಪ ಹರಿಜನನನ್ನು ಮುಗಿಸಿ ಬಿಡಬೇಕು ಎಂದು ಪ್ರಕಾಶ ಮೇಲಿನಕೇರಿ ಸಂಚು ಮಾಡಿ ಫೆ. 11 ರಂದು ರಾತ್ರಿ ವಿಜಯಪುರ ನಗರದ ಮದೀನಾ ನಗರದಲ್ಲಿ ಬಾಗಪ್ಪ ಹರಿಜನ ವಾಸಿಸುತ್ತಿದ್ದ ಬಾಡಿಗೆ ಮನೆಯ ಕಡೆಗೆ ತೆರಳಿ ಆತ ವಾಕಿಂಗ್ ಮಾಡುತ್ತಿದ್ದಾಗ ಆಟೋ ಮತ್ತು ಬೈಕ್‌ನಲ್ಲಿ ಬಂದು ಗುಂಡು ಹಾರಿಸಿ ಹೊಡೆದು ಕೊಲೆ ಮಾಡಿದ್ದಾರೆ. ಕೊಲೆಯಾದ ಭಾಗಪ್ಪ ಹುಚ್ಚಪ್ಪ ಹರಿಜನ ವಿರುದ್ಧ 10ಕ್ಕೂ ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಒಟ್ಟು ಆರು ಕೊಲೆ ಪ್ರಕರಣಗಳು ದಾಖಲಾಗಿವೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ.