ಪಾಟ್ನಾ: ರಾಷ್ಟ್ರೀಯ ಡೆಮಾಕ್ರೆಟಿಕ್ ಅಲಯನ್ಸ್ (ಎನ್ ಡಿಎ) ಮೈತ್ರಿಕೂಟದಿಂದ ಮಾಜಿ ಕೇಂದ್ರ ಸಚಿವ ಪಶುಪತಿ ಪಾರಸ್ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಲೋಕಜನಶಕ್ತಿ ಪಾರ್ಟಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಘೋಷಿಸಿದ್ದಾರೆ.
ಸೋಮವಾರ ಪಾಟ್ನಾದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಲೋಕಜನಶಕ್ತಿ ಪಾರ್ಟಿ ಮುಖ್ಯಸ್ಥ ಪಶುಪತಿ ಪಾರಸ್ 2014ರಿಂದ ನಾವು ಎನ್ ಡಿಎ ಮತ್ತು ಬಿಜೆಪಿ ಜೊತೆ ಇದ್ದೆವು. ಇನ್ನು ಮುಂದೆ ಎನ್ ಡಿಎ ಭಾಗವಾಗಿ ಇರುವುದಿಲ್ಲ ಎಂದು ಘೋಷಿಸಿದರು.
ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್ ಎಲ್ ಜೆಪಿ ಪಕ್ಷ 243 ಸ್ಥಾನಗಳಿಗೆ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಬಿಜೆಪಿ ಜೊತೆ ಸೇರಿದ ಸಿಎಂ ನಿತೀಶ್ ಕುಮಾರ್ ದಲಿತ ವಿರೋಧಿ ನೀತಿಗಳನ್ನು ಅನುಸರಿಸುತ್ತಿದ್ದು, ಇದರಿಂದ ಜನರು ಆಕ್ರೋಶಗೊಂಡಿದ್ದಾರೆ ಎಂದು ಅವರು ಹೇಳಿದರು.
ಬಿಹಾರದಲ್ಲಿ 22 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದು, ತಳಮಟ್ಟದಲ್ಲಿ ಜನಾಭಿಪ್ರಾಯ ಸಂಗ್ರಹಿಸಿದ್ದು, ಪ್ರಸ್ತುತ ರಾಜ್ಯದಲ್ಲಿರುವ ಮೈತ್ರಿ ಸರ್ಕಾರದ ವಿರುದ್ಧ ಜನಾಕ್ರೋಶವಿದೆ. ಮುಂದಿನ ದಿನಗಳಲ್ಲಿ ಉಳಿದ 16 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಪಕ್ಷ ಮುಂದಿನ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದ್ದು, ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಪ್ರಕಟಿಸಿದರು.