ತೀವ್ರ ಅನಾರೋಗ್ಯದಿಂದ ಮಂಗಳವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆ ಯಲ್ಲಿ ನಿಧನರಾದ ಬಾಗಲಕೋಟೆ ಶಾಸಕ ಎಚ್.ವೈ.ಮೇಟಿ ಅವರ ಅಂತ್ಯಕ್ರಿಯೆ ಅವರ ಸ್ವಗ್ರಾಮ ತಿಮ್ಮಾಪೂರದಲ್ಲಿ ಬುಧವಾರ ಮಧ್ಯಾಹ್ನ ಸಕಲ ಸರಕಾರಿ ಗೌರವದೊಂದಿಗೆ ಹಿಂದೂ ಕುರುಬ ಸಂಪ್ರದಾಯದಂತೆ ನಡೆಯಿತು.
ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಸರಕಾರಿ ಗೌರವ ಸಲ್ಲಿಸಲಾಯಿತು. ನಂತರ ರಾಷ್ಟ್ರಧ್ವಜ ಬಟ್ಟೆಯನ್ನು ಕುಟುಂಬದವರಿಗೆ ನೀಡಲಾಯಿತು. ಆ ಮೇಲೆ ಹಿಂದೂ ಸಂಪ್ರದಾಯದಂತೆ ಕ್ರಿಯಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.
ಪಾರ್ಥಿವ ಶರೀರವನ್ನು ತಿಮ್ಮಾಪೂರ ಗ್ರಾಮಕ್ಕೆ ತರುತ್ತಿದ್ದಂತೆ ಕುಟುಂಬದ ಸದಸ್ಯರು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿತ್ತು.
ತೆರೆದ ವಾಹನದಲ್ಲಿ ಬಾಗಲಕೋಟೆಯಿಂದ ತಿಮ್ಮಾಪೂರ ಗ್ರಾಮಕ್ಕೆ ತರಲಾಯಿತು. ಈ ಸಂದರ್ಭದಲ್ಲಿ ದಾರಿಯುದ್ದಕ್ಕೂ ಬರುವ ಗ್ರಾಮಗಳ ಗ್ರಾಮಸ್ಥರು ಶಾಸಕರ ಪಾರ್ಥಿವ್ ಶರೀರದ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.


